ಸೆಪ್ಟೆಂಬರ್ 6 -10 ರಿಂದ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್07: ಕರ್ನಾಟಕದ ಕರಾವಳಿಯಲ್ಲಿ ಸೆಪ್ಟೆಂಬರ್ 6 ರಿಂದ -10 ರ ವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ (ಸೆಪ್ಟೆಂಬರ್ 6) ತಿಳಿಸಿದೆ.
ಐಎಂಡಿ ಅಧಿಕಾರಿ ಸಿಎಸ್ ಪಾಟೀಲ್ ಅವರ ಪ್ರಕಾರ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 6ರಿಂದ 10 ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಈ ಪ್ರದೇಶಕ್ಕೆ ಎಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲೂ ಸೆಪ್ಟೆಂಬರ್ 6ರಿಂದ 10 ರ ವರೆಗೆ ಸಾಕಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಭಾರಿ ಮಳೆಯಾಗಬಹುದು ಎಂದು ಐಎಂಡಿ ಭವಿಷ್ಯ ನುಡಿದಿದೆ ಮತ್ತು ಸೆಪ್ಟೆಂಬರ್ 8 ಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಸೆಪ್ಟೆಂಬರ್ 6,7,9,10 ರಂದು ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 6ರಿಂದ 7ರ ವರೆಗೆ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ.
ಬೆಳಗಾವಿ, ಧಾರವಾಡ, ಗದಗ್ ಮುಂತಾದೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಸೆಪ್ಟೆಂಬರ್ 6 ಮತ್ತು 7 ಕ್ಕೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಸೆಪ್ಟೆಂಬರ್ 6ರಿಂದ 10ರ ಅವಧಿಯಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹೇಳಲಾಗಿದ್ದು, ಚಾಮರಾಜನಗರ, ಮೈಸೂರು, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸೆಪ್ಟೆಂಬರ್ 6,7,8 ಕ್ಕೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ
ಉತ್ತರಾಖಂಡ, ರಾಜಸ್ಥಾನ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಮಧ್ಯ ಮಹಾರಾಷ್ಟ್ರ, , ತಮಿಳುನಾಡು, ಪುದುಚೇರಿ,ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.