Hockey World Cup 2023 : ಇಂದಿನಿಂದ ಹಾಕಿ ವಿಶ್ವಕಪ್ ಸಂಭ್ರಮ; ಭಾರತಕ್ಕೆ ಸ್ಪೇನ್ ಎದುರಾಳಿ…
ಭಾರತದಲ್ಲಿ ಮತ್ತೊಮ್ಮೆ ಹಾಕಿ ವಿಶ್ವಕಪ್ ಸಂಭ್ರಮ ನಡೆಯುತ್ತಿದೆ. 15 ನೇ ವಿಶ್ವಕಪ್ ಇಂದು ಶುಕ್ರವಾರ ಒಡಿಶಾದಲ್ಲಿ ಆರಂಭವಾಗುತ್ತಿದೆ. ಎಫ್ ಐ ಎಚ್ ಪುರುಷರ ಹಾಕಿ ವಿಶ್ವಕಪ್ ನ ಅಂಗವಾಗಿ ಮೊದಲ ದಿನ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಭವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದೊಂದಿಗೆ ಮೆಗಾ ಟೂರ್ನಿಗೆ ಚಾಲನೆ ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ನಡುವೆ ಪಂದ್ಯ ನಡೆಯಲಿದೆ. ಸಂಜೆ 5 ಗಂಟೆಗೆ ರಾವುರ್ಕೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾಮುಂಡಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮತ್ತು ಸ್ಪೇನ್ ನಡುವಿನ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.
ಈ ಮೆಗಾ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು, ಭಾರತ ಸ್ಪೇನ್, ಇಂಗ್ಲೆಂಡ್, ಮತ್ತು ವೇಲ್ಸ್ ತಂಡಗಳ ಜೊತೆಗೆ ಡಿ ಗ್ರೂಪ್ ನಲ್ಲಿದೆ. ಟೂರ್ನಿಯಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಅಗ್ರ ತಂಡಗಳು ಕ್ವಾರ್ಟರ್ ಪೈನಲ್ ತಲುಪಲಿವೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಕ್ರಾಸ್ ಓವರ್‌ಗಳಲ್ಲಿ ಮುಖಾಮುಖಿಯಾಗಲಿವೆ. ಸೆಮಿ, ಫೈನಲ್ ಸೇರಿದಂತೆ 24 ಪಂದ್ಯಗಳು ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು 20 ಪಂದ್ಯಗಳು ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ಭಾರತ ಹಾಕಿ ತಂಡ ಆರಂಭದಲ್ಲೇ ಬಲಿಷ್ಠ ಸ್ಪೇನ್ ತಂಡವನ್ನ ಎದುರಿಸಲಿದೆ. ರ್ಯಾಂಕಿಂಗ್ ವಿಭಾಗದಲ್ಲಿ ಭಾರತ 6ನೇ ಸ್ಥಾನದಲ್ಲಿದ್ದರೆ, ಸ್ಪೇನ್ 8ನೇ ಸ್ಥಾನದಲ್ಲಿದೆ. ಆದರೆ, ಶ್ರೇಯಾಂಕದಲ್ಲಿ ಸ್ಪೇನ್ ಕೆಳಮಟ್ಟದಲ್ಲಿದ್ದರೂ ಬಲಿಷ್ಠ ತಂಡವಾಗಿದೆ. 2022ರಲ್ಲಿ ಭಾರತ ಮತ್ತು ಸ್ಪೇನ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದವು. ಸ್ಪೇನ್ ಎರಡು ಬಾರಿ ಗೆದ್ದರೆ ಭಾರತ ಒಂದು ಬಾರಿ ಗೆದ್ದಿದೆ. ಆದರೆ, ಇಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಭಾರತದ ಆಟಗಾರರು ಇದ್ದಾರೆ. ಅಂತಾರಾಷ್ಟ್ರೀಯ ಹಾಕಿಯಲ್ಲಿ ಈ ತಂಡಗಳು ಒಟ್ಟು 67 ಬಾರಿ ಮುಖಾಮುಖಿಯಾಗಿವೆ. ಭಾರತ 28 ಬಾರಿ ಮತ್ತು ಸ್ಪೇನ್ 25 ಬಾರಿ ಗೆದ್ದಿದೆ. 14 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಇಲ್ಲಿಯವರೆಗೆ ಭಾರತ, ನೆದರ್ಲೆಂಡ್ಸ್ ಮತ್ತು ಸ್ಪೇನ್ ಮಾತ್ರ ಎಲ್ಲಾ ವಿಶ್ವಕಪ್‌ಗಳಲ್ಲಿ ಸ್ಪರ್ಧಿಸಿವೆ.
Hockey World Cup 2023 : Hockey World Cup celebration from today; Spain is the opponent for India…