ಪ್ರಭಾವಿ ಬಿಜೆಪಿ ಕಾರ್ಯಕರ್ತನಿಂದ ಕಿಡ್ನಾಪ್ ಶಂಕೆ..?
ಹೊಸಕೋಟೆ: ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಅವರು ಮಂಗಳವಾರ ಸಂಜೆಯಿಂದ ನಿಗೂಢವಾಗಿ ಕಾಣೆಯಾಗಿದ್ದು, ಪ್ರಭಾವಿ ಬಿಜೆಪಿ ಕಾರ್ಯಕರ್ತ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಆಪ್ತ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೂರು ದಿನಗಳ ಬಳಿಕ ಟಿಹೆಚ್‍ಒ ಮಂಜುನಾಥ್ ಇಂದು ಅವರು ಹೊಸಕೋಟೆಗೆ ಆಗಮಿಸಿದ್ದಾರೆ.
ಮಂಗಳವಾರ ಸಂಜೆ ಕರ್ತವ್ಯ ನಿರ್ವಹಿಸಿ ಆಸ್ಪತ್ರೆಯಿಂದ ಹೊರಟ ಮಂಜುನಾಥ್ ಮನೆಗೂ ಹೋಗದೆ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಅವರ ಸ್ನೇಹಿತ ಗೋಪಾಲಕೃಷ್ಣ ಎಂಬುವರು ಹೊಸಕೋಟೆ ಠಾಣೆಗೆ ದೂರು ನೀಡಿದ್ದರು.
ಕ್ಲಿನಿಕ್ ಮೇಲಿನ ದಾಳಿ ಕಿಡ್ನಾಪ್‍ಗೆ ಕಾರಣವಾಯ್ತ..?
ಡಿಸೆಂಬರ್ 10 ರಂದು ಟಿಹೆಒ ಮಂಜುನಾಥ್ ಅವರು ಹೊಸಕೋಟೆ ನಗರದ ಎಂ.ವಿ ಬಡಾವಣೆಯಲ್ಲಿರುವ ಸುಜಾತ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅನಧಿಕೃತವಾಗಿ ಅಲ್ಲಿನ ವೈದ್ಯರು ನೀಡುತ್ತಿದ್ದ ಸುಮಾರು 10 ಲಕ್ಷ ಮೌಲ್ಯದ ಆಲೋಪಥಿ ಔಷಧಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
ಈ ವಿಚಾರವಾಗಿ ಹೊಸಕೋಟೆ ನಗರದ ಟೌನ್ ಬಿಜೆಪಿ ಅಧ್ಯಕ್ಷ ಜಯರಾಜ್ ಎಂಬುವವರು ವಶಕ್ಕೆ ಪಡೆದ ಔಷಧಿಗಳನ್ನು ವಾಪಸ್ ನೀಡುವಂತೆ ಮಂಜುನಾಥ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಟಿಹೆಚ್‍ಒ ಮಂಜುನಾಥ್ ಅವರ ನಿಗೂಢ ನಾಪತ್ತೆಗೆ ಆ ಪ್ರಭಾವಿ ಮುಖಂಡನೇ ಕಾರಣ ಎನ್ನಲಾಗಿತ್ತು.
ಬಿಜೆಪಿ ಮುಖಂಡನ ವಿಚಾರಣೆ
ಘಟನೆ ಕುರಿತಂತೆ ಟಿಹೆಚ್‍ಒ ನಾಪತ್ತೆ ಪ್ರಕರಣಕ್ಕೆ ತಾಲೂಕು ಬಿಜೆಪಿ ಅಧ್ಯಕ್ಷ ಡಾ.ಸಿ ಜಯರಾಜ್ ಅವರ ಹೆಸರು ಕೇಳಿ ಬಂದಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಹೊಸಕೋಟೆ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಟಿಹೆಚ್‍ಒ ಮಂಜುನಾಥ್ ಅವರ ಮೊಬೈಲ್ ಚನ್ನಪಟ್ಟಣದ ಬಳಿ ಬುಧವಾರ ಮಧ್ಯಾಹ್ನ ಚಾಲನೆಗೊಂಡು, ಆಫ್ ಆದ ಹಿನ್ನೆಲೆ ಮೈಸೂರು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾದ ಕಾರಣ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್, ವಿಶೇಷ ತಂಡ ರಚಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಇಂದು ಅವರನ್ನು ಸುರಕ್ಷಿತವಾಗಿ ಅವರನ್ನು ಪತ್ತೆ ಹಚ್ಚಿ ಹೊಸಕೋಟೆಗೆ ಕರೆ ತರಲಾಗಿದೆ.
ಸುಜಾತ ಕ್ಲಿನಿಕ್‍ನ ವೈದ್ಯ ಜಯರಾಜ್ ಸ್ನೇಹಿತ. ತನ್ನ ಸ್ನೇಹಿತನ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಟಿಹೆಚ್‍ಒ ಮಂಜುನಾಥ್ ಕಚೇರಿ ಮೇಲೆ ಬೆಂಬಲಿಗರೊಂದಿಗೆ ನುಗ್ಗಿ ಜಪ್ತಿ ಮಾಡಿದ್ದ ಔಷಧಿಗಳನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದಾದ ಬಳಿಕ ಟಿಹೆಚ್‍ಒ ಮಂಜುನಾಥ್ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ
ವಿಷಯ ತಿಳಿಯುತ್ತಿದ್ದಂತೆ ಕಳೆದ ಎರಡು ದಿನಗಳಿಂದ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಟಿಹೆಚ್‍ಒ ಮಂಜುನಾಥ್ ಅವರನ್ನು ಶೀಘ್ರವಾಗಿ ಹುಡುಕಿಕೊಟ್ಟು, ಅವರ ನಾಪತ್ತೆಗೆ ಕಾರಣರಾದವರನ್ನು ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel