ಪ್ರಧಾನಿ ಮೋದಿ ಚೀನಾದಿಂದ ಹೇಗೆ ಭೂಮಿಯನ್ನು ಮರಳಿ ಪಡೆಯುತ್ತಾರೆ – ಸೋನಿಯಾ ಗಾಂಧಿ
ಹೊಸದಿಲ್ಲಿ, ಜೂನ್ 27: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಚೀನಾವು ಲಡಾಖ್ ಪ್ರದೇಶದ ಭಾರತದ ಭೂಪ್ರದೇಶಕ್ಕೆ ನುಸುಳಿದೆ ಎಂದು ಪುನರುಚ್ಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯನ್ನು ಚೀನಾ ಹಿಡಿತದಿಂದ ಹೇಗೆ ಮರಳಿ ತೆಗೆದುಕೊಳ್ಳುತ್ತಾರೆ ಎಂದು ರಾಷ್ಟ್ರಕ್ಕೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ, ಸೋನಿಯಾ ಗಾಂಧಿ, ಸರ್ಕಾರವು ತನ್ನ ಜವಾಬ್ದಾರಿಗಳಿಂದ ಓಡಿಹೋಗಿದೆ ಎಂದು ಆರೋಪಿಸಿದ್ದಾರೆ.

ಇಂದು, ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸರ್ಕಾರವು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನಮ್ಮ ಭೂಪ್ರದೇಶದ ಮೇಲೆ ಯಾವುದೇ ಆಕ್ರಮಣವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ರಕ್ಷಣಾ ಮಂತ್ರಿ ಮತ್ತು ವಿದೇಶ್ ಮಂತ್ರಾಲಯವು ಗಡಿಯಲ್ಲಿ ಚೀನಾದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರ ಬಗ್ಗೆ ಮತ್ತು ಅವರ ಒಳನುಗ್ಗುವಿಕೆ ಬಗ್ಗೆ ಹಲವು ಬಾರಿ ಚರ್ಚಿಸಿದ್ದಾರೆ. ನಮ್ಮ ಸೈನ್ಯದ ಜನರಲ್‌ಗಳು, ರಕ್ಷಣಾ ತಜ್ಞರು ಮತ್ತು ಪತ್ರಿಕೆಗಳು ಉಪಗ್ರಹ ಚಿತ್ರಗಳನ್ನು ತೋರಿಸುವ ಮೂಲಕ ಚೀನಾದ ಒಳನುಸುಳುವಿಕೆಯ ಬಗ್ಗೆ ದೃಢಪಡಿಸುತ್ತಿವೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಇಂದು ನಾವು ಹುತಾತ್ಮರಿಗೆ ಗೌರವ ಸಲ್ಲಿಸುತ್ತಿರುವಾಗ, ಪ್ರಧಾನಿ ಹೇಳುವಂತೆ ಲಡಾಖ್‌ನಲ್ಲಿ ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲವೇ ಎಂದು ರಾಷ್ಟ್ರ ತಿಳಿಯಲು ಬಯಸುತ್ತದೆ, ಹಾಗಾದರೆ ನಮ್ಮ 20 ಸೈನಿಕರನ್ನು ಹೇಗೆ ಮತ್ತು ಏಕೆ ಕೊಲ್ಲಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.
ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯ ನಡೆಸಿರುವ ಆಕ್ರಮಣವನ್ನು ತಡೆಯುವ ಸಂದರ್ಭದಲ್ಲಿ ಭಾರತೀಯ ಸೈನ್ಯದ 20 ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಸೇವೆಗೆ ದೇಶವು ಎಂದೆಂದಿಗೂ ಋಣಿಯಾಗಿರುತ್ತದೆ. ನಮಗೆ ನಮ್ಮ ಸೈನಿಕರು ಹಾಗೂ ಸೈನ್ಯದ ಬಗ್ಗೆ ಹೆಮ್ಮೆ ಇದ್ದು, ನಾವು ಇಂದು ಸುರಕ್ಷಿತವಾಗಿದ್ದೇವೆ ಎಂದರೆ ಅದು ನಮ್ಮ ಯೋಧರಿಂದ ಎಂದು ಸೋನಿಯಾ ಗಾಂಧಿ ಹೇಳಿದರು.








