HR Keshavamurthy: ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಕೇಶವಮೂರ್ತಿ ವಿಧಿವಶ…
ಖ್ಯಾತ ಗಮಕ ಗಂಧರ್ವ ಕಲಾವಿದರಾದ ಪದ್ಮಶ್ರೀ ಪುರಸ್ಕ್ರತ ಹೊಸಹಳ್ಳಿ ಆರ್ ಕೇಶವಮೂರ್ತಿ ಅವರು ವಿಧಿವಶರಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಆರ್ ಕೇಶವಮೂರ್ತಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೂರ್ನಾಲ್ಕು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸ್ವಃಗೃಹದಲ್ಲಿ ನಿಧನ ಹೊಂದಿದ್ದಾರೆ.
ಇದೇ ವರ್ಷ ಮಾರ್ಚ್ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಖ್ಯಾತ ಗಮಕಿಗಳಾಗಿದ್ದ ಕೇಶವಮೂರ್ತಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಹೊಸಹಳ್ಳಿ ಕೇಶವಮೂರ್ತಿ ಅವರು 82 ವರ್ಷದ ಪತ್ನಿ ರಾಜೇಶ್ವರಿ ಹಾಗೂ ಪುತ್ರಿ ಉಷಾ ಅವರನ್ನ ಅಗಲಿದ್ದಾರೆ. ನಾಳೆ ಹೊಸಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಕೇಶವಮೂರ್ತಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಹಿರಿಯರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ಶಿವಮೊಗ್ಗ ಬಳಿಯ ಮತ್ತೂರು ಹೊಸಳ್ಳಿಯ ಖ್ಯಾತ ಗಮಕ ಕಲಾವಿದರಾದ ಪದ್ಮಶ್ರೀ ಶ್ರೀ ಹೆಚ್.ಆರ್.ಕೇಶವಮೂರ್ತಿ ಅವರು ನಿಧನರಾದ ಸುದ್ದಿ ಅತ್ಯಂತ ಆಘಾತ ತಂದಿದೆ. ಅವರ ನಿಧನದಿಂದ ಒಬ್ಬ ಹಿರಿಯ ವಿದ್ವಾಂಸರನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ಸಂತಾಪಗಳನ್ನು ಕೋರುತ್ತೇನೆ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.
HR Keshavamurthy: Padma Shri awardee Gamaka Gandharva Keshavamurthy no more…