ಹುಬ್ಬಳ್ಳಿ: ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ ಮಾಲಾಧಾರಿಗಳ ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.
ಪ್ರಕಾಶ ಬಾರಕೇರ (42) ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಪೈಕಿ ಈಗಾಗಲೇ 8 ಜನ ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಒಬ್ಬೊಬ್ಬರೇ ಇಹಲೋಕ ತ್ಯಜಿಸಿದ್ದರು. ಶೇ. 25 ಗಾಯಗೊಂಡಿದ್ದ 12 ವರ್ಷದ ವಿನಾಯಕ ಬಾರಕೇರ ಎಂಬ ಮಾಲಾಧಾರಿ ಬಾಲಕ ಮಾತ್ರ ಬದುಕಿಳಿದ್ದು, ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕಳೆದ ಭಾನುವಾರ ಬೆಳಗ್ಗೆ ಹುಬ್ಬಳ್ಳಿ ಅಚ್ಚವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ, ಮಾಲಾಧಾರಿಗಳು ಮಲಗಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿತ್ತು. ಮಾಲಾಧಾರಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪರಿಣಾಮ, ಬೆಂಗಳೂರಿನ ನುರಿತ ವೈದ್ಯರು ಮತ್ತು ಕಿಮ್ಸ್ ನಿರ್ದೇಶಕ ಎಸ್.ಎಫ್. ಕಮ್ಮಾರ ನೇತೃತ್ವದ ತಂಡ ಗಾಯಾಳುಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಾಯಾಳುಗಳು ಸಾವನ್ನಪ್ಪಿದ್ದಾರೆ.
ಡಿ.23ರಿಂದ 31 ರ ನಡುವೆ, ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ರಾಜು ಮುಗೇರಿ, ಲಿಂಗರಾಜ್ ಬಿರನೂರು, ಮಂಜುನಾಥ ವಾಗ್ಮೋಡೆ, ಶಂಕರ್ ಚಹ್ವಾಣ್, ತೇಜಸ್ವಿ ಸಾತ್ರೆ, ಪ್ರಕಾಶ್ ಬಾರಕೇರ ಸಾವನ್ನಪ್ಪಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








