ನಾಯಕ ಬಾಬರ್ ಆಜ಼ಂ(151) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್(109*) ಅವರುಗಳ ಅಮೋಘ ಶತಕದ ನೆರವಿನಿಂದ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ, ಆ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬಾಬರ್ ಆಜ಼ಂ(151) ಹಾಗೂ ಇಫ್ತಿಕರ್ ಅಹ್ಮದ್(109*) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 342 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ನೇಪಾಳ 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, 238 ರನ್‌ಗಳ ಭಾರೀ ಅಂತರದ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಫಕರ್ ಜಮಾನ್(14) ಹಾಗೂ ಇಮಾಮ್-ಉಲ್-ಹಕ್(5) ಬಹುಬೇಗನೆ ಹೊರ ನಡೆದರು. ಆದರೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಅಜಮ್, ಜವಾಬ್ದಾರಿಯ ಆಟವಾಡಿದರು. ನೇಪಾಳದ ಅನನುಭವಿ ಬೌಲಿಂಗ್ ವಿಭಾಗದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬಾಬರ್, 131 ಬಾಲ್‌ಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 154 ರನ್ ಸಿಡಿಸಿದರೆ. ಇಫ್ತಿಕರ್ 71 ಬಾಲ್‌ಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸೇರಿ 109* ರನ್‌ಗಳಿಸಿದರು. ಪರಿಣಾಮ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿತು.
ಪಾಕಿಸ್ತಾನ ನೀಡಿದ ಕಠಿಣ ಟಾರ್ಗೆಟ್ ಚೇಸ್ ಮಾಡಿದ ನೇಪಾಳ, ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ ಶಾಹೀನ್ ಅಫ್ರಿದಿ ತಮ್ಮ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಪಡೆದು ಶಾಕ್ ನೀಡಿದರು. ಬಳಿಕ 2ನೇ ಓವರ್‌ನಲ್ಲಿ ನಸೀಮ್ ಶಾ ಕೂಡ ಒಂದು ವಿಕೆಟ್ ಪಡೆದರು. ಆದರೆ ನಾಲ್ಕನೇ ವಿಕೆಟ್‌ಗೆ ಒಂದಾದ ಆರಿಫ್ ಶೇಖ್(26) ಮತ್ತು ಸೋಮ್‌ಪಾಲ್ ಕಾಮಿ(28) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಹಾರಿಸ್ ರೌಫ್ ಎರಡು ವಿಕೆಟ್ ಹಾಗೂ ಶದಾಬ್ ಖಾನ್ ನಾಲ್ಕು ವಿಕೆಟ್ ಪಡೆಯುವ ಮೂಲಕ ನೇಪಾಳ ತಂಡವನ್ನ 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ಕಟ್ಟಿಹಾಕಿದರು. ಭರ್ಜರಿ ಶತಕದ ಮೂಲಕ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಬಾಬರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.