ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ಸೊಗಲ ಜಲಪಾತ(Sogala Falls) ರೌದ್ರರಮಣೀಯವಾಗಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಸುಕ್ಷೇತ್ರ ಸೊಗಲ ಜಲಪಾತ(Sogala Falls) ಮೈದುಂಬಿ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸವದತ್ತಿ, ಕಿತ್ತೂರು, ಚಿಕ್ಕೋಡಿ, ಬೈಲಹೊಂಗಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.

ಹುಕ್ಕೇರಿ ಪಟ್ಟಣದಲ್ಲಿ ಭಾರಿ ಮಳೆ ಹೊಡೆತಕ್ಕೆ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ನಿನ್ನೆಯ ಮಳೆಯ ಅಬ್ಬರಕ್ಕೆ ಗ್ಯಾರೇಜ್‍ನ ಕಟ್ಟಡ ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮನೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ ಕತ್ತಿ 5ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.

ಇದಕ್ಕೂ ಮೊದಲು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಹುಕ್ಕೇರಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಅಂದಾಜು ಪರಿಶೀಲಿಸಿದರು.
ಇದೇ ವೇಳೆ ಹುಕ್ಕೇರಿ ಪಟ್ಟಣದ ನಾಲೆಯ ಹೂಳು ತೆಗೆಸುವುದು ಹಾಗೂ ನಾಲೆಯ ಮೇಲಿರುವ ಸೇತುವೆಗಳ ಎತ್ತರ ಹೆಚ್ಚಿಸುವಂತೆ ಶಾಸಕ ಉಮೇಶ್ ಕತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.








