ಬೆಂಗಳೂರು: ಕೊರೊನಾ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ 2ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿ ಹಾಕುತ್ತಿರೋ ಬಿಜೆಪಿ ನಾಯಕರು ದಾಖಲೆಗಳನ್ನು ಬಿಡುಗಡೆ ಮಾಡಿ, ಇಲ್ಲ ವಿಧಾನಸೌಧಕ್ಕೆ ಬನ್ನಿ ನಾವು ದಾಖಲೆಗಳನ್ನು ನೀಡುತ್ತೇವೆ, ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ಆರೋಪ ಮಾಡಬೇಡಿ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿಗರ ಈ ಹೇಳಿಕೆಗಳಿಗೆ ಇದೀಗ ಸಿದ್ದರಾಮಯ್ಯ ಟ್ವಿಟ್ಟರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ 11 ಪ್ರಶ್ನೆಗಳನ್ನು ಕೇಳಿ ಸಿಎಂಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ನಲ್ಲಿ ಏನಿದೆ.?
ಮೊದಲ ಟ್ವೀಟ್ ನಲ್ಲಿ, ಕೊರೊನಾ ಸಂಬಂಧಿಸಿದ ಆರೋಪ ಬಂದಾಗೆಲ್ಲ ‘ದಾಖಲೆ ನೀಡಿ’ ‘ವಿಧಾನಸೌಧಕ್ಕೆ ಬನ್ನಿ’ ಎಂದೆಲ್ಲ ಸವಾಲು ಹಾಕಿ ಕೆಲವು ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಸರ್ಕಾರ ಅರೆಬರೆ ಮಾಹಿತಿ ನೀಡಿತಪ್ಪಿಸಿ ಕೊಳ್ಳುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರಿಗೆ ನಿರ್ದಿಷ್ಠ ವಿವರ ಕೇಳಿ ಪತ್ರ ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಪತ್ರವನ್ನು ಟ್ಯಾಗ್ ಮಾಡಿದ್ದಾರೆ.
ನಂತರದ ಟ್ವೀಟ್ ಗಳಲ್ಲಿ…. ‘ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು.? ಹೆಚ್ಚುದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು.?’
‘ಕೊರೊನಾ ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಪಾವತಿ ಮಾಡಲಾದ ಹಣ ಎಷ್ಟು? ಕೇಂದ್ರ ಸರ್ಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು? ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು?’
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ..? ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು..? ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು..?’
‘ಕೊರೊನಾ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು..? ಗುಣಮಟ್ಟ ಸರಿಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು?
ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು..? ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು..?’
‘ಕೊರೊನಾ ನಿಯಂತ್ರಣಕ್ಕಾಗಿ ಎಸ್ಡಿಆರ್ಎಫ್ ಮತ್ತು ಎನ್ ಡಿ ಆರ್ ಎಫ್ ಅನುದಾನದಲ್ಲಿ ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಹಣ ಎಷ್ಟು..? ಆ ಅನುದಾನದಲ್ಲಿ ಜಿಲ್ಲಾಡಳಿತಗಳು ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಿದೆ..?’
‘ಆಹಾರ,ಆಹಾರ ಧಾನ್ಯಗಳ ಕಿಟ್ ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಿದೆ..? ಪ್ರತಿ ಆಹಾರ ಪ್ಯಾಕೇಟ್/ ಆಹಾರ ಧಾನ್ಯಗಳ ಪ್ಯಾಕೇಟ್ ಕಿಟ್ ಗೆ ನೀಡಿದ ಕನಿಷ್ಠ/ಗರಿಷ್ಠ ದರ ಎಷ್ಟು..? ಆಹಾರ ತಯಾರಿಸಿದ ಸಂಸ್ಥೆಗಳು ಯಾವುವು? ಯಾವ ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ..?’
‘ರಾಜ್ಯದಲ್ಲಿ ಒಟ್ಟು ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ..? ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇಲ್ಲಿಯ ವರೆಗೆ ಖರ್ಚು ಮಾಡಿದ ದುಡ್ಡೆಷ್ಟು..? ಯಾವ ಬಾಬತ್ತಿಗೆ ಖರ್ಚು ಮಾಡಲಾಗಿದೆ?
ಕ್ವಾರಂಟೈನ್ ಗೊಳಗಾದ ಪ್ರತಿ ವ್ಯಕ್ತಿಗೆ ತಗಲಿರುವ ಖರ್ಚೆಷ್ಟು..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.








