ಕೋಲಾರ : ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ ನಮ್ಮ ರಾಜ್ಯದಲ್ಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪರಮೇಶ್ವರ್, ಕೊರೊನಾ ಹೆಸರಿನಲ್ಲಿ ಸುಮಾರು ಎರಡು ಸಾವಿರ ಕೋಟಿಗಿಂತಲು ಅಧಿಕ ಹಣ ಸಚಿವರ ಜೇಬಿಗೆ ಹೋಗಿದೆ. ಕೊರೊನಾ ಆವರಿಸಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಸೋಂಕು ತಡೆಗಟ್ಟುವಲ್ಲಿ ಸರ್ಕಾರ ನಿರ್ಲಕ್ಷ್ಯತೆ ವಹಿಸಿದೆ. ಕೊರೊನಾ ಹೆಸರಿನಲ್ಲಿ ದುಡ್ಡು ಮಾಡುವ ಕೆಟ್ಟ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಸೋಂಕು ತಡೆ ಸಲುವಾಗಿ ಕಾಂಗ್ರೆಸ್ ಪಕ್ಷ ನೀಡಿದ ಸಲಹೆಗಳನ್ನ ಸಹ ನಿರ್ಲಕ್ಷ್ಯ ಮಾಡಿದ್ದು, ಸೋಂಕಿನ ಕುರಿತು ಜನಸಮುದಾಯಕ್ಕೆ ಮಾಹಿತಿ ತಲುಪಿಸುವಲ್ಲಿಯೂ ಸಹ ವಿಫಲವಾಗಿದೆ ಎಂದು ಗುಡುಗಿದರು.
ಸಚಿವರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಜನರನ್ನು ಮರಳು ಮಾಡುತ್ತಿದ್ದಾರೆ. ಇದರಿಂದ ಜನರು ಬೀದಿಯಲ್ಲಿ ಸಾಯುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಇಂತಹ ಹೇಯ, ನೀಚ ಕೃತ್ಯ ಮತ್ತೊಂದಿಲ್ಲ. ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ ನಮ್ಮ ರಾಜ್ಯದಲ್ಲಿದೆ ಎಂದು ಕಿಡಿಕಾರಿದರು.
ಇನ್ನು ಭ್ರಷ್ಟಾಚಾರ ಮಾಡುವ ಸಲುವಾಗಿ ಆರೋಗ್ಯ, ವೈದ್ಯಕೀಯ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಸಚಿವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂದು ದೂರಿದ ಪರಮೇಶ್ವರ್, ತಮಗಿಷ್ಟ ಬಂದ ಹಾಗೆ ಕೋವಿಡ್ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದಾರೆ. ಈ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.