ದಾವಣಗೆರೆ: ಮದ್ಯ ಸೇವಿಸಲು ಪತ್ನಿ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ತಲೆಯ ಮೇಲೆ ಪತಿ ಕಲ್ಲು ಹಾಕಿರುವ ಘಟನೆಯೊಂದು ನಡೆದಿದೆ.
ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕದರಪ್ಪ (60) ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಸಾಕಮ್ಮ (55) ಹಲ್ಲೆಗೊಳಗಾಗಿದ್ದು, ಕೋಮಾ ಸ್ಥಿತಿಗೆ ಜಾರಿದ್ದಾರೆ. ಸದ್ಯ ದಾವಣಗೆರೆಯ ಎಸ್‌ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದಂಪತಿ ಹಲವು ವರ್ಷಗಳಿಂದ ಕುರಿ ಮೇಯಿಸುತ್ತಿದ್ದರು. ಇತ್ತೀಚೆಗೆ ಕೂಡ ಕುರಿ ಮೇಯಿಸುವುದಕ್ಕಾಗಿ ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮ ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ತೋಟವೊಂದರಲ್ಲಿ ಉಳಿದಿದ್ದರು. ಆದರೆ, ಮದ್ಯ ವ್ಯಸನಿಯಾಗಿದ್ದ ಆರೋಪಿ, ಹಣ ನೀಡುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಆದರೆ, ಅವರು ಹಣ ಕೊಡಲು ನಿರಕಾರಿಸಿದ್ದಾರೆ. ಇದರಿಂದಾಗಿ ಕೋಪಗೊಂಡ ವ್ಯಕ್ತಿ, ಕಲ್ಲನ್ನು ತಲೆಯ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದಾನೆ. ಈ ಕುರಿತು ಮಗ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.