ಬೆಳಗಾವಿ : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ರಮೇಶ್ ಜಾರಕಿಹೊಳಿ, ಹೆಚ್ ವಿಶ್ವನಾಥ್ ಸೇರಿದಂತೆ 17 ಶಾಸಕರ ರಾಜೀನಾಮೆ ಕಾರಣ ಎಂದು ಇಡೀ ದೇಶಕ್ಕೆ ಗೊತ್ತಿದೆ. ಆದರೆ ಈಗ ಈ ನಾಯಕರಿಗೇ ಬಿಜೆಪಿಯಲ್ಲಿ ಬೆಲೆ ಇಲ್ವಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಇದಕ್ಕೆ ಕಾರಣ ಇಂದು ಸಚಿವ ರಮೇಶ್ ಜಾರಕಿಹೊಳಿಯ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂಬ ಹೇಳಿಕೆ.
ಹೌದು..! ಇಂದು ಬೆಳಗಾವಿಯಲ್ಲಿ ಹೆಚ್ ವಿಶ್ವನಾಥ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ಹೆಚ್ ವಿಶ್ವನಾಥ ಮತ್ತು ಉಮೇಶ್ ಕತ್ತಿ ಅವರಿಗೆ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಈ ಕುರಿತು ಏನೂ ಹೇಳುವದಿಲ್ಲ ಎಂದರು.
ವರಸೆ ಬದಲಿಸಿದ್ರಾ ಸಾಹುಕಾರ್..?
ಈ ಹಿಂದೆ ಇದೇ ಪ್ರಶ್ನೆಗೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಬೇರೆಯದ್ದೆ ದಾಟಿಯಲ್ಲಿ ಉತ್ತರ ನೀಡುತ್ತಿದ್ದರು. ವಿಶ್ವನಾಥ್ ಗೆ ಮಂತ್ರಿಸ್ಥಾನ ನೀಡಲೇಬೇಕು. ಅವರ ಪರ ನಾವಿದ್ದೇವೆ, ಸಿಎಂ ಹೇಳಿದ ಮಾತು ಉಳಿಸಿಕೊಳ್ಳಬೇಕು ಎಂದು ಸ್ವಲ್ಪ ರಗಡ್ ಆಗಿ ಮಾತನಾಡುತ್ತಿದ್ದರು.
ಆದ್ರೆ ಇಂದಿನ ಅವರ ಹೇಳಿಕೆಯಲ್ಲಿ ಇದ್ಯಾವುದು ಕಾಣಲೇ ಇಲ್ಲ. ಎಲ್ಲವೂ ಪಕ್ಷ ನೋಡಿಕೊಳ್ಳುತ್ತೆ ಎನ್ನುವ ಮೂಲಕ ವಿಶ್ವನಾಥ್ ವಿಚಾರವಾಗಿ ಸೈಲೆಂಟ್ ಆಗಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ನಾವೂ ಜೀವಂತ ಇದ್ದೇವೆ ಎಂದು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ಅನ್ನೋದು ದೇಶದ ಜನರಿಗೆ ಗೊತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ, ಶೀಘ್ರದಲ್ಲಿಯೇ ಬಡವರ ಪರವಾಗಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ತಿರುಗೇಟು ನೀಡಿದರು.