ಮಂತ್ರಿ ಆಗದಿರುವುದಕ್ಕೆ ನನಗೆ ಬೇಸರವಾಗಿಲ್ಲ : ಲಕ್ಷ್ಮಣ್ ಸವದಿ
ಚಿಕ್ಕೋಡಿ : ರಾಜ್ಯದ ಸಚಿವ ಸಂಪುಟದಲ್ಲಿ 33 ಖಾತೆಗಳಿವೆ, ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಆಸೆ ಎಲ್ಲ 224 ಜನರಿಗೂ ಇರುತ್ತದೆ. ಮಂತ್ರಿ ಆಗದೇ ಇರುವದಕ್ಕೆ ನನಗೆ ಯಾವುದೇ ಬೇಜಾರಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಬಿಎಸ್ ವೈ ಸಂಪುಟದಲ್ಲಿ ಡಿಸಿಎಂ ಆಗಿದ್ದ ಲಕ್ಷ್ಮಣ್ ಸವದಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕನಿಷ್ಠ ಮಂತ್ರಿ ಕೂಡ ಆಗಿಲ್ಲ. ಅವರಿಗೆ ಮಂತ್ರಿಸ್ಥಾನ ಸಿಗದಿದ್ದಕ್ಕೆ ಅವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋತಂತಹ ವ್ಯಕ್ತಿಯನ್ನು ಡಿಸಿಎಂ ಮಾಡಿದ್ದಾರೆ ಸಚಿವನನ್ನಾಗಿ ಮಾಡಿದ್ದಾರೆ. ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಉತ್ತಮ ಅವಕಾಶಗಳನ್ನು ನನಗೆ ಕೊಟ್ಟಿದ್ದಾರೆ. ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧಾರಿತ ಖಾತೆ ಹಂಚಿಕೆಯನ್ನು ಪಕ್ಷದ ವರಿಷ್ಟರು ಮಾಡಿದ್ದಾರೆ. ರಾಜ್ಯದ ಸಚಿವ ಸಂಪುಟದಲ್ಲಿ 33 ಖಾತೆಗಳಿವೆ, ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಆಸೆ ಎಲ್ಲ 224 ಜನರಿಗೂ ಇರುತ್ತದೆ. ಮಂತ್ರಿ ಆಗದೇ ಇರುವದಕ್ಕೆ ನನಗೆ ಯಾವುದೇ ಬೇಜಾರಿಲ್ಲ ಎಂದು ಸವದಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಉತ್ತರ ಕರ್ನಾಟಕದವರು ನನ್ನ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂಬ ಆಶಯವಿದೆ ಎಂದ ಸವದಿ, 2023ರ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ನಾವೆಲ್ಲ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ. ಆದ್ದರಿಂದ ನಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರು ಯಾವುದೇ ರೀತಿ ಧೃತಿಗೆಡಬಾರದು ಎಂದು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡರು.









