ಬೆಂಗಳೂರು: ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ನಾನು ಆಡಿದ ಮಾತನ್ನು ವಾಪಸ್ ಪಡೆದಿದ್ದೇನೆ. ಜತೆಗೆ ಈಗಾಗಲೇ ಕ್ಷಮೆಯನ್ನೂ ಕೇಳಿದ್ದೇನೆ. ಚಿರುಪತ್ನಿ ಮೇಘನಾರಾಜ್ ಹೇಳಿದರೆ ಬಹಿರಂಗ ಕ್ಷಮೆಯಾಚನೆಗೂ ನಾನು ಸಿದ್ಧ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.
ನಾನು ಎಲ್ಲಿ ಬೇಕಾದರೂ ಕ್ಷಮೆ ಕೇಳಲು ನಾನು ಸಿದ್ಧ. ಯಾವ ವೇದಿಕೆಯಲ್ಲಿ ಆದರೂ ಸರಿ ಕ್ಷಮೆ ಕೇಳುವೆ. ವಾಣಿಜ್ಯ ಮಂಡಳಿಗೆ ಕರೆದರೂ ನಾನು ರೆಡಿ, ಇಲ್ಲ ಮೇಘನಾರಾಜ್ ಅವರ ಮನೆಗೆ ಕರೆದರೂ ನಾನು ರೆಡಿ. ಕ್ಷಮೆ ಕೇಳುವುದು ದೊಡ್ಡ ವಿಚಾರ ಅಲ್ಲ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಚಿರಂಜೀವಿ ಸರ್ಜಾ ನನ್ನ ಆತ್ಮೀಯ ಗೆಳೆಯ. ಆತನ ಸಾವು ನನಗೂ ಆಘಾತ ತಂದಿದೆ. ಹಲವು ಕಾರ್ಯಕ್ರಮಗಳ ವೇದಿಕೆಗಳಲ್ಲಿ ಚಿರಂಜೀವಿ ಸರ್ಜಾ ಜತೆ ಪಾಲ್ಗೊಂಡಿದ್ದೇನೆ. ಪೋಸ್ಟ್ ಮಾರ್ಟಂ ಮಾಡಿದ್ದರೆ ಸಾವು ಹೇಗಾಯ್ತು ಎಂದು ಗೊತ್ತಾಗುತ್ತಿತ್ತು ಎಂದು ಹೇಳಿದ್ದೆ. ಆದರೆ, ನಾನು ಡ್ರಗ್ಸ್‍ನಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಇಂದ್ರಜಿತ್ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಡ್ರಗ್ಸ್ ಮಾಫಿಯಾ ಆಗುತ್ತಿದೆ. ಇಲ್ಲಿನ ತಪ್ಪುಗಳನ್ನು ಸರಿಪಡಿಸುವ ಅಗತ್ಯ ಇದೆ ಎಂಬ ಕಾರಣಕ್ಕೆ ನಾನು ಮಾತನಾಡಿದ್ದೆ. ಕನ್ನಡ ಚಿತ್ರರಂಗ ಕ್ಲೀನ್ ಆಗಿದೆ,
ಪವಿತ್ರವಾಗಿದೆ ಎಂದವರು ಈಗ ಯಾಕೆ ಸೈಲೆಂಟ್ ಆಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಮೊದಲು ಕನ್ನಡ ಚಿತ್ರರಂಗವನ್ನು ಕ್ಲೀನ್ ಅಪ್ ಮಾಡಬೇಕು. ಯುವ ನಟರು ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು ಎಂಬುದು ನನ್ನ ಮಾತಿನ ಕಳಕಳಿಯಾಗಿದೆ. ನಟಿ ರಾಗಿಣಿ ಮನೆಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ. ಚಿತ್ರರಂಗದ ಯಾರೂ ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳುತ್ತಿದ್ದವರಿಗೆ ಈಗ ಅರ್ಥವಾಗಿದೆ ಎಂದು ಇಂದ್ರಜಿತ್ ಹೇಳಿದ್ದಾರೆ.