ನನಗೆ ಸಿಎಂ ಸ್ಥಾನ ಬೇಕಿಲ್ಲ, ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ : ಡಿಕೆಶಿ
ಬೆಂಗಳೂರು : ಜನ ನಾನು ಮುಖ್ಯಮಂತ್ರಿ ಆಗಬೇಕು ಅಂತ ಜೈಕಾರ ಹಾಕಿದ್ರು. ಅದು ನನಗೆ ಅವಶ್ಯಕತೆಯಿಲ್ಲ. ಪಕ್ಷ ಅಧಿಕಾರಕ್ಕೆ ಬರುವುದೇ ನನಗೆ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಕಾರ್ಯಾಧ್ಯಕ್ಷರರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನವಿರೋಧಿ ಆಡಳಿತ ನಡೆಸುತ್ತಿವೆ. ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ನಾವು ಹೋರಾಟ ಮಾಡಬೇಕು. ಇದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಆಗಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಇನ್ನು ನಾವು ಸರ್ಕಾರದ ವಿರುದ್ಧ ಹೋರಾಟ ಮಾಡೋಕೆ ಅವಕಾಶ ಹುಡುಕಬೇಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಪರೀತ್ಯಗಳು ನಮಗೆ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿವೆ. ಎಲ್ಲ ವರ್ಗದ ಜನ ಬೀದಿಗೆ ಬಂದಿದ್ದಾರೆ. ಬದುಕು ನಡೆಸುವುದು ದುಸ್ತರ ಆಗಿದೆ. ಜನರ ಧ್ವನಿ ಆಗೋಕೆ ನಮಗೆ ಅವಕಾಶ ಸಿಕ್ಕಿದೆ. ಇದು ನಮ್ಮ ಪಕ್ಷದ ಸಂಘಟನೆ ಹಾಗೂ ಹೋರಾಟದ ವರ್ಷ. ಆ ನಿಟ್ಟಿನಲ್ಲಿ ನಾವು ಹೋರಾಟ ಮಾಡಬೇಕು. ನಾವು ಈ ಸ್ಥಾನದಲ್ಲಿ ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ. ಪಕ್ಷ ಸಂಘಟನೆ ಹೇಗೆ ಮಾಡ್ತೇವೆ ಅನ್ನುವುದು ಮುಖ್ಯ. ವ್ಯಕ್ತಿ ಪೂಜೆ ಮಾಡುವುದನ್ನು ಬಿಡಬೇಕು. ಪಕ್ಷ ಪೂಜೆ ಮಾಡಿ ಅಧಿಕಾರಕ್ಕೆ ತರೋಣ ಎಂದು ಹೇಳಿದರು.
