ರಾಜ್ಯದ ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಾವು ಸಂಪೂರ್ಣವಾಗಿ ನಿಷ್ಠಾವಂತರಾಗಿರುವುದನ್ನು ಪುನರುಚ್ಚರಿಸಿದ್ದಾರೆ. ಪಕ್ಷವಿದ್ದರೆ ತಾನೇ ನಾನು. ಪಕ್ಷವೇ ಇಲ್ಲದಿದ್ದರೆ ನಾನಿಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ಅವರು ಗುರುವಾರ ಮಾಧ್ಯಮದ ಎದುರು ವ್ಯಕ್ತಪಡಿಸಿದರು.
ಡಿಕೆಶಿ ಅವರು ಮಾತನಾಡಿದ ಸಂದರ್ಭ, ನಾನು ಮಲ್ಲಿಕಾರ್ಜುನ ಖರ್ಗೆ ಕೊಟ್ಟ ದೀಕ್ಷೆ ಸ್ವೀಕಾರ ಮಾಡಿದ್ದೇನೆ. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ, ಪಕ್ಷ ಹೇಳಿದ ತೀರ್ಮಾನಗಳನ್ನೇ ಪಾಲಿಸುತ್ತೇನೆ ಎಂದು ತಿಳಿಸಿದರು.
ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ
ನಾನು ನಿನ್ನೆ ಬ್ಯುಸಿಯಾಗಿದ್ದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯನವರು ನೀಡಿರುವ ‘ಐದು ವರ್ಷ ನಾನು ಸಿಎಂ’ ಎಂಬ ಹೇಳಿಕೆಯನ್ನು ನೋಡಿದೆ. ಅವರು ಒಂದು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಅದಕ್ಕೂ ಮೀರಿ ನಾನು ಮತ್ತೆ ಏನು ಮಾತನಾಡುವುದು ಬೇಡ. ಅವರು ಉತ್ತರ ನೀಡಿದ್ದಾರೆ ಅಂದಮೇಲೆ ನಾವು ಮತ್ತೆ ಆ ವಿಚಾರವನ್ನು ಚರ್ಚಿಸುವುದು ಸೂಕ್ತವಲ್ಲ ಎಂದು ಡಿಕೆಶಿ ಹೇಳಿದರು.
ಈ ಮೂಲಕ, ಡಿಕೆ ಶಿವಕುಮಾರ್ ಅವರು ಪಕ್ಷದ ಶಿಸ್ತು ಪಾಲನೆ, ಉನ್ನತ ನಾಯಕರ ತೀರ್ಮಾನಗಳಿಗೆ ಬದ್ಧತೆ ಮತ್ತು ತಮ್ಮ ವೈಯಕ್ತಿಕ ಆಸೆಗಳಿಗಿಂತಲೂ ಪಕ್ಷದ ನಿಲುವು ಮುಖ್ಯ ಎಂಬ ಮಾತುಗಳನ್ನು ಪುನರ್ ದೃಢಪಡಿಸಿದ್ದಾರೆ.








