ನೀನು ಆಸ್ಟ್ರೇಲಿಯಾದಲ್ಲಿ ಗೆಲ್ಲುವುದನ್ನು ನಿರೀಕ್ಷೆ ಮಾಡುತ್ತಿದ್ದೇನೆ – ಕೊಹ್ಲಿಗೆ ದಾದಾನ ಆರ್ಡರ್…!
ಕೋವಿಡ್ ಸೋಂಕಿಗೆ ಯಾವಾಗ ಮುಕ್ತಿ ಸಿಗುತ್ತೆ… ಗೊತ್ತಿಲ್ಲ. ಐಪಿಎಲ್ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ- ಭಾರತ ನಡುವೆ ಟೆಸ್ಟ್ ಸರಣಿ ಮಾತ್ರ ನಡೆಯುತ್ತೆ. ಹಗಲು ರಾತ್ರಿ ಟೆಸ್ಟ್ ಪಂದ್ಯ ಸೇರಿದಂತೆ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಪಡೆಯ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಆದ್ರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಂಡದಲ್ಲಿರಲಿಲ್ಲ. ಆದ್ರೆ ಈ ಬಾರಿ ಹಾಗಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಆಡುತ್ತಿದ್ದಾರೆ. ಹೀಗಾಗಿ ಈ ಸರಣಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಇನ್ನು ಗಂಗೂಲಿ ವಿರಾಟ್ ಕೊಹ್ಲಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ನೀನು ವಿರಾಟ್ ಕೊಹ್ಲಿ. ನಿನ್ನ ಘನತೆ ಈಗ ಉತ್ತುಂಗದಲ್ಲಿದೆ. ನೀನು ಆಡುತ್ತಿರುವುದನ್ನು ಮತ್ತು ನಿನ್ನ ತಂಡದ ಜೊತೆ ಆಡುತ್ತಿರುವುದನ್ನು ನಾನು ಟಿವಿಯಲ್ಲಿ ನೋಡ್ತಾ ಇರುತ್ತೇನೆ. ಹಾಗಂತ ನೀನು ಆಸ್ಟ್ರೇಲಿಯಾ ವಿರುದ್ಧ ಶ್ರೇಷ್ಠ ಮಟ್ಟದ ಆಟ ಪ್ರದರ್ಶನ ನೀಡುತ್ತಿಯ ಎಂಬ ನಿರೀಕ್ಷೆಯಲ್ಲ. ನಾನು ನೀನು ನಿರೀಕ್ಷೆ ಮಾಡುತ್ತಿರುವುದು ನೀನು ಗೆಲ್ಲುವುದನ್ನು ಎಂದು ಗಂಗೂಲಿ ಈಗಾಗಲೇ ವಿರಾಟ್ ಕೊಹ್ಲಿಗೆ ಹೇಳಿದ್ದಾರೆ ಎಂದು ಸ್ವತಃ ಗಂಗೂಲಿಯೇ ಹೇಳಿಕೊಂಡಿದ್ದಾರೆ.
ಈಗಾಗಲೇ ಗಂಗೂಲಿಯವರು ವಿರಾಟ್ ಜೊತೆಗೆ ಸಂಪರ್ಕದಲ್ಲಿದ್ದಾರೆ. ವಿರಾಟ್ ಫಿಟ್ನೆಸ್ ಹಾಗೂ ತಂಡದ ಆಟಗಾರರ ಫಿಟ್ನೆಸ್ ಬಗ್ಗೆಯೂ ವಿರಾಟ್ ಜೊತೆ ಗಂಗೂಲಿ ಚರ್ಚೆ ನಡೆಸಿದ್ದಾರೆ. 2018ರಲ್ಲಿ ಏನು ಆಗಿತ್ತು ಎಂಬುದು ಮುಖ್ಯವಲ್ಲ. ಆಗಿನ ಆಸ್ಟ್ರೇಲಿಯಾ ತಂಡಕ್ಕೂ ಈಗೀನ ತಂಡಕ್ಕೂ ತುಂಬಾನೇ ವ್ಯತ್ಯಾಸವಿದೆ. ಸದ್ಯದ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ. ಹಾಗೇ ಟೀಮ್ ಇಂಡಿಯಾವೂ ಉನ್ನತಮಟ್ಟದಲ್ಲಿದೆ ಎಂದು ಗಂಗೂಲಿ ಹೇಳಿದ್ದಾರೆ.