ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಈ ಹಿಂದೆ ಹಲವು ಪ್ಯಾಕೇಜ್ ಗಳನ್ನು ಘೋಷಿಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಇನ್ಮುಂದೆ ಯಾವುದೇ ಸಮುದಾಯಕ್ಕೆ ಕೊರೊನಾ ಪರಿಹಾರ ಘೋಷಣೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿ ಇರುವ ನೆಹರೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಹಣ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ನನ್ನ ಶಕ್ತಿ ಮೀರಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಹೀಗಾಗಿ ಇನ್ಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ವಿಚಾರವಾಗಿ ಮಾಹಿತಿ ನೀಡಿದ ಸಿಎಂ, ದೇವಾಲಯಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದೇವೆ. ಇದರೊಂದಿಗೆ ಮಸೀದಿ, ಚರ್ಚ್ ಗಳಿಗೂ ಅವಕಾಶ ಕೊಡಲಾಗುತ್ತದೆ. ಈ ಸಂಬಂಧ ಕೇಂದ್ರದಿಂದ ಅನುಮತಿ ಸಿಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಕೆಲವು ನಿಬಂಧನೆಗಳನ್ನು ಅಳವಡಿಸಲು ಸಲಹೆ ಕೊಟ್ಟಿದ್ದಾರೆ. ಅದನ್ನು ಅನುಸರಿಸಲಾಗುತ್ತದೆ. ನಾವು ಕೊರೊನಾ ಜತೆ ಬದುಕಬೇಕಾಗಿದೆ. ಸಾಕಷ್ಟು ಸಮಸ್ಯೆಗಳಿವೆ, ಹೊರಗಿನ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಅವರೆಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದರು.








