ಹಾಸನ : ಡ್ರಗ್ಸ್ ಮೂಲ ಎಲ್ಲಿದೆ ಅಂತ ನನಗೆ ಗೊತ್ತಿದೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶಿವಲಿಂಗೇಗೌಡರು ಇಂದ ಅರಸೀಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡುತ್ತ ಡ್ರಗ್ ಮಾಫಿಯಾ ಬಗ್ಗೆ ಪ್ರಸ್ತಾಪಿಸಿದರು. ಎಲ್ಲಾ ದೇಶದಲ್ಲೂ ಡ್ರಗ್ಸ್ ಇದೆ. ನಮ್ಮ ಭಾರತದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಯಾವುದೇ ಬೀಚ್ ಗೆ ಹೋಗಿ ಅಲ್ಲಿ ಕುಡಿದು ಮಲಗಿರುವವರೆಲ್ಲಾ ಡ್ರಗ್ಸ್ ತೆಗೆದುಕೊಂಡು ಮಲಗಿರುತ್ತಾರೆ. ಎಲ್ಲಿ ಲಾಭವಿದೆ ಅಲ್ಲಿ ಅದಕ್ಕೆ ಬಿಸಿನೆಸ್ ದಾರರು ಹುಟ್ಟಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ದೇಶ, ರಾಜ್ಯದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿದೆ ಎಂದು ಬೇಸರ ಹೊರಹಾಕಿದರು.
ಈ ಹಿಂದೆ ವಿಧಾನಸೌಧದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ 3-4 ಗಂಟೆಗಳ ಕಾಲ ಚರ್ಚೆಯಾಗಿತ್ತು. ಆಗಲೇ ನಾನು ಡ್ರಗ್ಸ್ ಬಗ್ಗೆ ವಿರೋಧ ಮಾಡಿದ್ದೆ. ಈ ಹಿಂದೆ ಶಾಸಕ ಕಳಸಪ್ಪ ಬಂಡಿ, ನನ್ನ ಮಗ ಎಂಬಿಬಿಎಸ್ ಓದುತ್ತಿದ್ದಾನೆ ಡ್ರಗ್ಸ್‍ಗೆ ಅಡಿಕ್ಟ್ ಆಗಿದ್ದಾನೆ. ನನ್ನ ಮಗನನ್ನ ಉಳಿಸಿಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಅಂದೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಈಗ ನಿಯಂತ್ರಣಕ್ಕೆ ತರಬಹುದಿತ್ತು. ಈಗಲಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.
ಡ್ರಗ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ. ಆ ಮೂಲವನ್ನ ಬೈಯ್ಯಲು ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಯಾರೋ ನಾಲ್ಕು ಜನ ಆರ್ಥಿಕವಾಗಿ ಮುಂದುವರಿಯಲು ಯುವಕರನ್ನ ಹಾಳು ಮಾಡುವ ಕೆಟ್ಟ ಪ್ರವೃತ್ತಿ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.