ಪಕ್ಷಾಂತರ ಮಾಡಿ ತಪ್ಪು ಮಾಡಿಬಿಟ್ಟೆ – ಎಂ.ಟಿ.ಬಿ. ನಾಗರಾಜ್
ಒಂದು ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿರುವುದು ರಾಜಕೀಯ ಜೀವನದಲ್ಲಿ ನಾನು ಮಾಡಿದ ಮೊದಲ ತಪ್ಪು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಬಹಿರಂಗವಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಟಿ.ಬಿ “ರಾಜಕೀಯದಲ್ಲಿ ನಾನು ಹಣ ಮಾಡಬೇಕು ಎಂದೇನಿಲ್ಲ. ಆ ವಿಷಯದಲ್ಲಿ ನಾನು ಇಂದಿಗೂ ಪರಿಶುದ್ಧನಾಗಿದ್ದೇನೆ. ರಾಜಕೀಯ ಜೀವನದಲ್ಲಿ ನಾನು ಮಾಡಿದ ಒಂದೇ ಒಂದು ತಪ್ಪು ಎಂದರೆ, ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಸೇರಿರುವುದು. ಅದರ ಅರಿವು ಈಗ ಆಗುತ್ತಿದೆ.” ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಡೆಯವರೇ ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸಿದರು’ ಎಂದು ಸುಬ್ಬಾರೆಡ್ಡಿ ಅವರತ್ತ ತಿರುಗಿ ಹೇಳಿದರು.
ಇದೀಗ ಈ ಹೇಳಿಕೆ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾದ ನಂತರ ಪ್ರತಿಕ್ರಿಯೆ ನೀಡಿರುವ ಎಂಟಿಬಿ, ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ, ನನ್ನ ಹೇಳಿಕೆಗೆ ಬೇರೆ ಅರ್ಥ ಬೇಡ. ಪಕ್ಷಾಂತರದ ಬಗೆಗಿನ ನನ್ನ ಹೇಳಿಕೆ ನೈತಿಕ ಮತ್ತು ಸೈದ್ಧಾಂತಿಕವಾದದ್ದು. ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡಿದ್ದೇನೆ. ಇದರ ಹೊರತು ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ.








