“ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ” : ಎಂಟಿಬಿ ನಾಗರಾಜ್ MTB Nagaraj
ದೇವನಹಳ್ಳಿ : ಮುಖ್ಯಮಂತ್ರಿಯಾಗುವ ಆಸೆ ಯಾರಿಗೆ ಇರಲ್ಲ ಹೇಳಿ, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ಕುರಿತು ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ಯಾರಿಗೆ ಇಲ್ಲರ ಹೇಳಿ..? ಯಡಿಯೂರಪ್ಪನವರು ಬಿಟ್ಟರೆ ನನಗೂ ಸಿಎಂ ಆಗ್ಬೇಕೆಂಬ ಆಸೆ ಇದೆ. ಆಸೆಯಿಲ್ಲದ ಮನುಷ್ಯ ಯಾರೂ ಇಲ್ಲ. ಎಲ್ಲರೂ ಅವರದ್ದೇ ಆದಂತಹ ಒಂದೊಂದು ಆಸೆ ಇಟ್ಟುಕೊಂಡಿರುತ್ತಾರೆ. ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಶಾಸಕರಾಗಿ ಬರಬೇಕು. ನಂತರ ಶಾಸಕಾಂಗ ಪಕ್ಷ ಸಭೆ ನಡೆಯುತ್ತದೆ, ಅಲ್ಲಿ ಸಿಎಂ ಯಾರು ಎಂಬ ಬಗ್ಗೆ ತೀರ್ಮಾನವಾಗಬೇಕು ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನಲ್ಲಿಯೂ ಅವರವರು ತಾನು ಮುಖ್ಯಮಂತ್ರಿಯಾಗಬೇಕು, ತಮ್ಮ ನಾಯಕರು ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿರುತ್ತಾರೆ, ಅದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯಗಳಷ್ಟೆ,ಹೇಳಿದಂತೆ, ಅಂದುಕೊಂಡಂತೆ ನಡೆಯುವುದಿಲ್ಲ. ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಈಗಲೇ ಮಾತನಾಡುವುದೇಕೆ, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿಕೊಳ್ಳುವುದು ಎನ್ನುವಂತೆ ಈಗಲೇ ಮುಖ್ಯಮಂತ್ರಿ ಬಗ್ಗೆ ಚರ್ಚೆಯೇಕೆ ಎಂದು ಪ್ರಶ್ನಿಸಿದರು.