ಚಿಕ್ಕೋಡಿ : ಜನರು ನನ್ನನ್ನು ತೇಲು ಅಂತ ಹೇಳಿದರೆ ತೇಲುತ್ತೇನೆ. ಮುಳುಗು ಅಂದರೆ ಮುಳುಗುತ್ತೇನೆ. ಮನೆಯಲ್ಲಿಯೇ ಇರು ಎಂದರೆ ಇರುತ್ತೇನೆ. ಸ್ಪರ್ಧೆ ಮಾಡು ಅಂದರೆ ಮಾಡುತ್ತೇನೆ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ (Chikkodi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಹೇಳಿದಂತೆ ಜನರು ಕೇಳಿದ್ದಾರೆ. ಸದ್ಯ ಅವರು ಹೇಳಿದಂತೆ ನಾನು ಕೇಳಬೇಕಾದ ಪರಿಸ್ಥಿತಿ ಬಂದಿದೆ. ನಾನು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಜನರು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಯಾರ ಬಗ್ಗೆಯೂ ಕಮೆಂಟ್ ಮಾಡುವುದಿಲ್ಲ. ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ. ನಂತರ ಕಾರ್ಯಕರ್ತರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ನನ್ನ ಜೊತೆ ಮಾತನಾಡುತ್ತೇನೆ ಎಂದು ದೆಹಲಿಯಲ್ಲಿ (Delhi) ಹೇಳಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿದ ನಂತರ ನನ್ನ ತೀರ್ಮಾನ ಹೇಳುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಮಹೇಶ್ ಅಥವಾ ನನಗೆ ಕೊಡಬೇಕು. ಇಲ್ಲವೆಂದರೆ ಮೂರನೇ ವ್ಯಕ್ತಿಗೆ ಕೊಡಬೇಕು. ನಾನು ಬೇಕೋ ಅಥವಾ ಬೇರೆಯವರು ಬೋಕೋ ಎಂದು ಕ್ಷೇತ್ರದ ಜನರಲ್ಲಿ ಕೇಳುತ್ತೇನೆ. ಜನರ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.








