IAS Vs IPS ಅಧಿಕಾರಿಗಳ ಗಲಾಟೆ ಇದೀಗ ಸಿನಿಮಾವಾಗಲಿದೆ..!!
ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿಬಿಟ್ಟಿರುವ IAS ಅಧಿಕಾರಿ ಹಾಗೂ IPS ಅಧಿಕಾರಿಯ ಗಲಾಟೆಯನ್ನ ಇದೀಗ ಸಿನಿಮಾ ರೂಪದಲ್ಲಿ ಹೊರ ತರಲು ಮೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ..
ಹೌದು..! ಇಬ್ಬರು ನಿರ್ಮಾಪಕರು ಈ ಸಿನಿಮಾ ಮಾಡಲು ಮುಂದಾಗಿದ್ದು, ಟೈಟಲ್ ರಿಜಿಸ್ಟರ್ ಗಾಗಿ ಫಿಲಂ ಚೇಂಬರ್ ಗೆ ಅರ್ಜಿ ಹಾಕಿದ್ದಾರೆ.
ಈ ಹಿಂದೆ ಐದು ಅಡಿ ಏಳು ಅಂಗುಲ, ಕೋಡಂಗಿ ಸಿನಿಮಾಗಳನ್ನು ನಿರ್ಮಿಸಿರುವ ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹಾಗೂ ಪ್ರವೀಣ್ ಶೆಟ್ಟಿ ಎಂಬ ನಿರ್ಮಾಪಕರು ಎರಡು ಪ್ರತ್ಯೇಕ ಟೈಟಲ್ ನೀಡುವಂತೆ ಕೋರಿದ್ದಾರೆ.
ಐಎಎಸ್ – ಐಪಿಎಸ್ ಜಗಳದ ಕೇಂದ್ರ ಬಿಂದುವಾಗಿರುವ ಅಧಿಕಾರಿಯ ಹೆಸರುಳ್ಳ ಟೈಟಲ್ಗಾಗಿ ಒಂದು ಅರ್ಜಿ ಬಂದಿದ್ದು ಆ ಸಿನಿಮಾವನ್ನು ಪ್ರವೀಣ್ ಶೆಟ್ಟಿ ಎಂಬುವರು ನಿರ್ಮಾಣ ಮಾಡಲಿದ್ದಾರೆ. R v/s R ಎಂಬ ಮತ್ತೊಂದು ಟೈಟಲ್ ಗಾಗಿಯೂ ಅರ್ಜಿ ಬಂದಿದ್ದು ಈ ಸಿನಿಮಾವನ್ನು ನಿತ್ಯಾನಂದ ಪ್ರಭು ಎಸ್ ಎಂಬುವರು ನಿರ್ದೇಶನ ಮಾಡಲಿದ್ದಾರೆ. ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ.
ಅಧಿಕಾರ, ರಾಜಕೀಯ, ಭ್ರಷ್ಟಾಚಾರ, ಹಣ, ಸೌಂದರ್ಯ, ಮಾದಕತೆ, ಪ್ರೀತಿ, ಮೋಸ, ನಿರಾಸೆ, ಆತ್ಮಹತ್ಯೆ, ಕುಟುಂಬ ಹಲವು ಅಂಶಗಳನ್ನು ಒಳಗೊಂಡ ಈ ಸತ್ಯಕತೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಟೈಟಲ್ ಅನ್ನು ನೀಡುವಂತೆ ಫಿಲಂ ಚೇಂಬರ್ಗೆ ಮನವಿ ಮಾಡಿದ್ದಾರೆ.
ಟೈಟಲ್ ರಿಜಿಸ್ಟರ್ಗೆ ಅರ್ಜಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ಇಂದಷ್ಟೆ ಸಿನಿಮಾ ಟೈಟಲ್ ಗಾಗಿ ಅರ್ಜಿಗಳು ಬಂದಿವೆ. ಬಂದಿರುವ ಎರಡೂ ಅರ್ಜಿಗಳನ್ನು ಸೋಮವಾರ ಟೈಟಲ್ ಕಮಿಟಿಯ ಮುಂದಿಡುತ್ತೇವೆ. ಸಮಿತಿ ಅನುಮತಿ ನೀಡಿದರೆ ಟೈಟಲ್ ನೀಡುತ್ತೇವೆ. ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಅವರಿಂದ ನಿರಪೇಕ್ಷಣಾ ಪತ್ರ (NOC) ಪಡೆಯಬೇಕಾಗುತ್ತದೆ ಎಂದಿದ್ದಾರೆ.
IAS Vs IPS Officers tussle is now going to be a movie..!!