ಒಂದೆಡೆ ರಾಮಜನ್ಮಭೂಮಿಯಲ್ಲಿ ಎಷ್ಟೋ ರ್ಷಗಳ ಹಿಂದೂಗಳ ಕನಸಾದ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಸ ಸಮಾರಂಭ ನೆರವೇರಲಿದೆ. ದೇಶಾದ್ಯಂತ ಇದೇ ಸಂತಸದಲ್ಲಿ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದ್ರೆ ಕೆಲವೆಡೆ ಇಂದು ಗಲಾಟೆಗಳೂ ಆಗಬಹುದು ಎಂಬ ಮುಂದಾಲೋಚನೆಯೊಂದಿಗೆ ಅನೇಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ರೆ ಅಯೋಧ್ಯೆಯಲ್ಲಿನ ಸ್ಥಳೀಯ ಮುಸ್ಲಿಂ ಬಾಂಧವರು ರಾಮಮಂದಿರದ ನಿರ್ಮಾಣದ ನಿರ್ಧಾರವನ್ನು ಮನಸ್ಪೂರ್ತಿಯಾಗಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಬಬ್ಲೂ ಖಾನ್ ಎಂಬುವವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ ಕಾಬಾ ಮುಸ್ಲಿಮರಿಗೆ ಪವಿತ್ರಸ್ಥಾನವಾದರೆ ರಾಮಜನ್ಮಭೂಮಿ ಹಿಂದೂಗಳಿಗೆ ಪವಿತ್ರವಾದ ಸ್ಥಳ” ಎನ್ನುತ್ತಾರೆ ಬಬ್ಲೂ ಖಾನ್. ಅಲ್ಲದೇ “ ಇದರಿಂದ ರಾಷ್ಟ್ರ ನಿರ್ಮಾಣಕ್ಕೆ ( ಅಭಿವೃದ್ಧಿ) ಸಹಾಯವಾಗಲಿದೆ. ಈ ಭೂಮಿ ಪೂಜೆ ದೇಶದ ಅಭಿವೃದ್ಧಿಗಾಗಿ , ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯಕ್ಕಾಗಿ, ಒಗ್ಗಟ್ಟಿಗಾಗಿ ನಡೆಯುತ್ತಿರುವ ಪೂಜೆ” ಎಂದಿದ್ದಾರೆ. ಅಷ್ಟೇ ಅಲ್ಲ “ ಮುಸ್ಲಿಂ ಬಾಂಧವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಹಳ ಉತ್ಸುಕರಾಗಿ ಕಾಯುತ್ತಿದ್ದಾರೆ” ಎಂದಿದ್ದಾರೆ. ಇದೇ ವೇಳೆ ರಾಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಬಬ್ಲೂ ಖಾನ್ ಆಕ್ರೋಶ ಹೊರಹಾಕಿದ್ದಾರೆ.
“ ದೇವಾಲಯ ನಿರ್ಮಾಣದ ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ. ಅವರೆಲ್ಲರೂ ಜೈ ಶ್ರೀ ರಾಮ್ ಎಂದು ಹೇಳುವ ಮೂಲಕ ತಮ್ಮ ಪಾಪಗಳನ್ನು ತೊಳೆದುಕೊಳ್ಳುವುದು ಉತ್ತಮ ಎಂದು ಭಾವಿಸುತ್ತೇನೆ” ಎಂದಿದ್ದಾರೆ. “ನಾನು ಖುರಾನ್ ಅನ್ನು ಅಕ್ಷರಸಹ ಚಾಚೂತಪ್ಪದೇ ಅನುಸರಿಸುತ್ತೇನೆ” ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ. “ಕಾಬಾ ಮುಸ್ಲಿ ಬಾಂಧವರಿಗೆ ಪವಿತ್ರಸ್ಥಳವಾದ್ರೆ, ರಾಮಜನ್ಮಭೂಮಿ ಹಿಂದೂಗಳಿಗೆ ಪವಿತ್ರವಾದ ಸ್ಥಳ. ಇದು ಭಗವಾನ್ ರಾಮನ ನಗರ” ಎಂದಿದ್ದಾರೆ ಖಾನ್.
ಇನ್ನೂ ರಾಮಜನ್ಮಭೂಮಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಟೈಲರ್ ಅಂಗಡಿ ಹಾಕಿಕೊಂಡಿರುವ ಹಾಜಿದ್ ಸಾಜಿದ್ ಎಂಬಾತರು “ರಾಮಮಂದಿರ ನಿರ್ಮಾಣದಿಂದಾಗಿ ಅಯೋಧ್ಯೆಯು ಅಭಿವೃದ್ಧಿಯಾಗಲಿದೆ. ಮತ್ತು ಇದರಿಂದ ಉದ್ಯೋಗ ಸೃಷ್ಟಿಯಾಗಿ ಅನೇಕ ನಿರುದ್ಯೋಗಿಗಳಿಗೆ ಸಹಾಯವಾಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುತ್ತಿರುವ ಈ ಸಮಾರಂಭದಲ್ಲಿ ಯಾವುದೇ ರೀತಿಯಾದ ಉದ್ವೇಗದ ವಾತಾವರಣ ಇಲ್ಲ” ಎನ್ನುವುದು ರಾಮಜನ್ಮಭೂಮಿಯ ಸ್ಥಳೀಯರಾದ ರಫೀಕ್ ಖುರೇಶಿ ಅವರ ಅಭಿಪ್ರಾಯವಾಗಿದೆ. ಅಲ್ದೇ ” ದೊರಾಹಿ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮುಸ್ಲಿಂ ಪರಿವಾರದವರಿದ್ದು, ಇಲ್ಲಿ ಶಾಂತಿಯುತ ವಾತಾವರಣವಿದೆ. ಇಲ್ಲಿ ಯಾವುದೇ ತೊಂದರೆಯಿಲ್ಲ” ಎಂದು ಖುರೇಶಿ ಇದೇ ವೇಳೆ ತಿಳಿಸಿದ್ದಾರೆ.








