ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಮೂರನೇ ಆವೃತ್ತಿಯ ಫೈನಲ್ ಪ್ರವೇಶ ಮಾಡಲು ಹಲವು ತಂಡಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಭಾರತ ತಂಡ ಕೂಡ ಇದಕ್ಕೆ ಹೊರತಲ್ಲ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯ ಗೆದ್ದರೆ, ಭಾರತಕ್ಕೆ ಅನುಕೂಲಗಳು ಹೆಚ್ಚಾಗಲಿವೆ.
ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ಸಮಬಲ ಸಾಧಿಸಿವೆ. ಮೂರನೇ ಟೆಸ್ಟ್ ಪಂದ್ಯ ಎರಡೂ ತಂಡಗಳಿಗೂ ಮುಖ್ಯವಾಗಿದೆ. ಭಾರತ ಈ ಪಂದ್ಯವನ್ನು ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕಾಲಿಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ 66.66 ಶೇಕಡಾ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡವು ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ 55 ಶೇಕಡಾವಾರು ಗೆಲುವಿನೊಂದಿಗೆ ಎರಡನೇ ಸ್ಥಾನ, 52.77 ಗೆಲುವಿನ ಶೇಕಡಾವಾರುವಿನೊಂದಿಗೆ ಭಾರತ ತಂಡವು ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಮೂರನೇ ಟೆಸ್ಟ್ ನ್ನು ಭಾರತ ಗೆದ್ದರೆ ಭಾರತ ತಂಡ 2ನೇ ಸ್ಥಾನಕ್ಕೆ ಕಾಲಿಡಲಿದೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ 6 ಪಂದ್ಯಗಳಲ್ಲಿ ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಡ್ರಾ ಆಗಿದೆ. ನ್ಯೂಜಿಲೆಂಡ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈ ಸರಣಿಯ ಎರಡನೇ ಪಂದ್ಯ ಫೆಬ್ರವರಿ 13 ರಿಂದ ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋತರೆ ಒಂದು ವೇಳೆ ಭಾರತ ಮೂರನೇ ಟೆಸ್ಟ್ ಗೆದ್ದರೆ ಅಗ್ರಸ್ಥಾನಕ್ಕೆ ಏರಿಕೆಯಾಗಲಿದೆ.