ಅನ್ನಭಾಗ್ಯ ಯೋಜನೆಗೆ ಆಂಧ್ರದಿಂದ ಅಕ್ಕಿ ಬರಲಿದೆ. ಎಫ್ ಸಿಐ ನಿಗದಿ ಪಡಿಸಿದ ದರಕ್ಕೆ ಅಕ್ಕಿ ಪೂರೈಕೆ ಮಾಡಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ ಎನ್ನಲಾಗಿದೆ.
ಇದರಿಂದಾಗಿ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಣೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಈ ಕುರಿತಾಗಿ ಆಹಾರ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಆಂಧ್ರದ ಆಹಾರ ಇಲಾಖೆ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ.
ಬೆಂಗಳೂರಿನಲ್ಲಿ ಉಭಯ ಸಚಿವರು ಮಾತುಕತೆ ನಡೆಸಿದ್ದಾರೆ. ಎಫ್ ಸಿಐ ನಿಗದಿಪಡಿಸಿದ ದರದಲ್ಲಿ ಅಕ್ಕಿ ಪೂರೈಕೆ ಮಾಡಲು ಅವಕಾಶ ನೀಡುವುದರೊಂದಿಗೆ ನಿರ್ದಿಷ್ಟ ಪ್ರಮಾಣ ತಿಳಿಸಬೇಕು. ಅನುಮತಿ ನೀಡಿದಲ್ಲಿ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ನಿಯೋಗ ಹೇಳಿದೆ.
ನಿಯೋಗದೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಸಚಿವ ಮುನಿಯಪ್ಪ, ಮಾತುಕತೆಯ ವಿವರಗಳ ಕುರಿತು ಸಿಎಂ ಅವರೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆದು ಮಾಹಿತಿ ನೀಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.








