ಮನೆಯಿಂದ ಹೊರ ಬಂದ ಇಮ್ರಾನ್ ಪಾಷಾ : ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್
ಬೆಂಗಳೂರು : ಕೊರೊನಾ ಸೋಂಕಿದ್ದರೂ ಮನೆಯಿಂದ ಹೊರ ಬಾರದೇ ಪಟ್ಟುಹಿಡಿದಿದ್ದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಇದೀಗ ಹೊರ ಬಂದಿದ್ದಾರೆ. ಇಮ್ರಾನ್ ಅವರು ಪಿಪಿಇ ಕಿಟ್ ಧರಿಸಿ ಮನೆಯಿಂದ ಹೊರಬಂದಿದ್ದು, ಅವರನ್ನು ವೈದ್ಯಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಇಮ್ರಾನ್ ಅವರಿಗೆ ಶುಕ್ರವಾರ ರಾತ್ರಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆದರೆ ಇಡೀ ರಾತ್ರಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಗ್ಯಾಧಿಕಾರಿಗಳು ಮನೆಗೆ ಹೋಗಿದ್ದರೂ ಇಮ್ರಾನ್ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ವೈದ್ಯಾಧಿಕಾರಿಗಳು, ಇಮ್ರಾನ್ ಮನೆಗೆ ತೆರಳಿದ್ದರು.
ಈ ವೇಳೆ ಅಲ್ಲಿ ಹೈಡ್ರಾಮಾವೇ ನಡೆಯಿತು. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇಮ್ರಾನ್ ಪಾಷಾ, ಮನೆಯಿಂದ ಹೊರ ಬರಲು ಸತಾಯಿಸಿದರು. ನನಗೆ ಸ್ವಲ್ಪ ಸಮಯ ಕೊಡಿ, ಮತ್ತೊಂದು ವರದಿ ಬಂದ ಮೇಲೆ ನಾನು ಆಸ್ಪತ್ರೆಗೆ ಬರುತ್ತೇನೆ ಎಂದು ಪಟ್ಟು ಹಿಡಿದಿದ್ದರು.
ಈ ವೇಳೆ ಶಾಸಕ ಜಮೀರ್ ಖಾನ್ ಅವರು ಇಮ್ರಾನ್ ಅವರ ಮನವೊಲಿಕೆಗೆ ಪ್ರಯತ್ನಿಸಿದರು. ಕೊನೆಗೆ ನಮಾಜ್ ಮಾಡಿ ಇಮ್ರಾನ್ ಅವರು ಮನೆಯಿಂದ ಹೊರಬಂದಿದ್ದು, ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇನ್ನು ಇಮ್ರಾನ್ ಗೆ 158 ಜನ ಕಾಂಟ್ಯಾಕ್ಟ್ ಇದ್ದು, ಅದರಲ್ಲೂ 75 ಜನ ಪ್ರೈಮರಿ ಕಾಂಟ್ಯಾಕ್ಟ್ ಇದ್ದಾರೆ. ಉಳಿದವರೆಲ್ಲ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ತಿಳಿದುಬಂದಿದೆ. ಹೀಗಾಗಿ ಶಾಸಕರು, ಅಧಿಕಾರಿಗಳು ಆಪ್ತರೆಲ್ಲ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ. ಸದ್ಯ ಇಮ್ರಾನ್ ಪಾಷಾ ಮನೆಯ ಬಳಿ ಔಷಧಿ ಸಿಂಪಡನೆ ಕೆಲಸಕ್ಕೆ ಚಾಲನೆ ನೀಡಲಾಗಿದೆ.








