ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು ಈ ಮೊದಲು ಆರೆಂಜ್ ಝೋನ್ ನಲ್ಲಿದ್ದ ದಕ್ಷಿಣ ಕನ್ನಡವು ರೆಡ್ ಝೋನ್ ಪಟ್ಟಿಗೆ ಸೇರ್ಪಡೆಯಾಗಿದೆ. ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ಆಧರಿಸಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು, ಕಳೆದ 14 ದಿನಗಳಲ್ಲಿ ಸೋಂಕು ದೃಢಪಟ್ಟ ಜಿಲ್ಲೆಯನ್ನು ಕೆಂಪು ವಲಯವಾಗಿ ಗುರುತಿಸಲಾಗಿದೆ.
ಕಳೆದ 14 ದಿನಗಳಲ್ಲಿ ಯಾವುದೇ ಪ್ರಕರಣ ದಾಖಲಾಗದ ಮತ್ತು15 ರಿಂದ 28 ದಿನಗಳಲ್ಲಿ ಸೋಂಕು ಪ್ರಕರಣ ದೃಢಪಟ್ಟ ಜಿಲ್ಲೆಯನ್ನು ಕಿತ್ತಳೆ ವಲಯವಾಗಿಯೂ, ಕಳೆದ 28 ದಿನಗಳಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಡದ ಜಿಲ್ಲೆಯನ್ನು ಹಸಿರು ವಲಯವಾಗಿಯೂ ಗುರುತಿಸಲಾಗಿದೆ.
ಉಡುಪಿ ಜಿಲ್ಲೆ ಗ್ರೀನ್ ಝೋನ್ ನ ಅರ್ಹತೆ ಗಳಿಸಿದ್ದು, ಅಧಿಕೃತವಾಗಿ ಘೋಷಣೆಯಾಗಲು ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋಳೂರು ನಿವಾಸಿ, 58 ವರ್ಷದ ಮಹಿಳೆಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರ ಗಂಟಲ ಸ್ರಾವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು.
ಇದೀಗ ಕೊರೊನಾ ದೃಢವಾದ ಹಿನ್ನಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರು ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರೋಗಿ ಸಂಖ್ಯೆ 501 ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಬೋಳೂರು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 135ಕ್ಕೂ ಅಧಿಕ ಮನೆಗಳಿದ್ದು, 640ಕ್ಕೂ ಹೆಚ್ಚು ಮಂದಿ ಜನ ವಾಸವಾಗಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಸೀಲ್ ಡೌನ್ ವ್ಯಾಪ್ತಿಯಲ್ಲಿ12 ಅಂಗಡಿ ಮುಂಗಟ್ಟುಗಳು ಸೇರಿವೆ.
ಪೂರ್ವಕ್ಕೆ ಜೇಮ್ಸ್ ಡಿ ಸೋಜಾ ನಿವಾಸ, ಪಶ್ಚಿಮಕ್ಕೆ ಹಿಂದೂ ರುದ್ರ ಭೂಮಿ ಬೋಳೂರು, ಉತ್ತರಕ್ಕೆ ಬಿ.ಜೆ ಹೋಟೇಲ್ ಶ್ರೀ ವಿನಾಯಕ ಹೋಟೇಲ್ ಸುಲ್ತಾನ್ ಬತ್ತೇರಿ ಹಾಗೂ ದಕ್ಷಿಣಕ್ಕೆ ಹಿಂದೂ ರುದ್ರ ಭೂಮಿ, ಬೋಳೂರು ಎಂಟ್ರೆನ್ಸ್ ರಸ್ತೆ ಸುಲ್ತಾನ್ ಬತ್ತೇರಿ ಪ್ರದೇಶಗಳು ಸೀಲ್ ಡೌಲ್ ಗೆ ಒಳಪಡುತ್ತದೆ.
ಬೋಳೂರಿನ ಸುತ್ತಮುತ್ತಲಿನ 5 ಕೀ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ 16350 ಮನೆ, 1275 ಅಂಗಡಿ ಮುಂಗಟ್ಟುಗಳಿದ್ದು, 79,800 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಬಫರ್ ಝೋನ್ ವ್ಯಾಪ್ತಿ ಪ್ರದೇಶವು ಪೂರ್ವಕ್ಕೆ ಬೊಂದೇಲ್, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಎಮ್ ಸಿ ಎಫ್ ರಾಷ್ಟ್ರೀಯ ಹೆದ್ದಾರಿ ಮತ್ತು ದಕ್ಷಿಣಕ್ಕೆ ನೇತ್ರಾವತಿ ನದಿ ಬೋಳಾರ್ ತನಕ ಒಳಪಡುತ್ತದೆ.