ಜಟ್ಕಾಕಟ್ ಮಾಂಸಕ್ಕೆ ಹೆಚ್ಚಿದ ಬೇಡಿಕೆ
ಬೆಂಗಳೂರು: ಯುಗಾದಿ ಹಬ್ಬದ ಹಿನ್ನಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಂಸ ಮಾರಾಟ ಜೋರಾಗಿದ್ದು, ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದದ ಮಧ್ಯೆಯು ಮಾಂಸ ಭರ್ಜರಿಯಾಗಿ ಮಾರಾಟವಾಗುತ್ತಿದೆ.
ಬೆಳ್ಳಂ ಬೆಳಿಗ್ಗೆಯಿಂದ ಮಾಂಸದ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತು ಜನರು ಮಾಂಸ ಖರೀದಿಸುತ್ತಿದ್ದಾರೆ. ಈ ಮಧ್ಯೆ ಜಟ್ಕಾ ಕಟ್ ಮಾಂಸ ಮಾರಟ ಜೋರಾಗಿಯೇ ನಡೆಯುತ್ತಿದೆ.
ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಮಾಂಸ ಮಾರಾಟ ಅಂಗಡಿಗಳಲ್ಲಿ ಸಿದ್ಧತೆ ನಡೆದಿತ್ತು. ಬೆಳಗ್ಗೆ ಮಾಂಸದಂಗಡಿಗಳತ್ತ ಜನರ ದಂಡು ಬರಲಾರಂಭಿಸಿತು.
ಬೆಂಗಳೂರಿನ ಯಶವಂತ ಮಾರುಕಟ್ಟೆ, ಮೈಸೂರಿನ ಪಾಪಣ್ಣ ಮಟನ್ ಸ್ಟಾಲ್, ಕೆ.ಜಿ.ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಖರೀದಿ, ತುಮಕೂರಿನ ಹಿಂದೂ ಮೀಟ್ ಮಾರ್ಟ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಇನ್ನೂ ಹಲಾಲ್ ಕಟ್ , ಜಟ್ಕಾ ಕಟ್ ಬೋರ್ಡ್ ಗಳು ಅಂಗಡಿ ಮುಂದೆ ಕಾಣುತ್ತಿದ್ದು, ಜಟ್ಕಾಕಟ್ ಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಾಶೆಗೊಂಡಿದ್ದ ವ್ಯಾಪಾರಿಗಳ ಮೊಗದಲ್ಲೂ ಹರುಷ ತುಂಬಿದೆ. ಬರುವ ಗ್ರಾಹಕರಿಗೆ ಸಂತಸದಿಂದಲೇ ಮಾಂಸ ನೀಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ.