ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್(137) ಬೊಂಬಾಟ್ ಶತಕ ಹಾಗೂ ಮಾರ್ನಸ್ ಲಬುಶೇನ್(58*) ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನ 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಸಿ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ.
ಕೈಕೊಟ್ಟ ಶುಭ್ಮನ್-ಶ್ರೇಯಸ್:
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ(47 ರನ್, 31 ಬಾಲ್, 4 ಬೌಂಡರಿ, 3 ಸಿಕ್ಸ್) ಸ್ಪೋಟಕ ಆರಂಭ ನೀಡಿದರು. ಆದರೆ ಮತ್ತೋರ್ವ ಆರಂಭಿಕ ಶುಭ್ಮನ್ ಗಿಲ್(4) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ ನಿರಾಸೆ ಮೂಡಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ಶ್ರೇಯಸ್ ಅಯ್ಯರ್(4) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ 10.2 ಓವರ್‌ಗಳಲ್ಲಿ 81 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ವಿರಾಟ್-ರಾಹುಲ್ ಆಸರೆ:
ಆದರೆ 4ನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ(54 ರನ್, 63 ಬಾಲ್, 4 ಬೌಂಡರಿ) ಹಾಗೂ ಕೆಎಲ್ ರಾಹುಲ್(66 ರನ್, 107 ಬಾಲ್, 1 ಬೌಂಡರಿ) ಎಚ್ಚರಿಕೆಯ ಆಟದ ಮೂಲಕ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಇಬ್ಬರು ಕೂಡ ನಿರ್ಣಾಯಕ ಹಂತದಲ್ಲಿ ಔಟಾಗಿದ್ದು ಭಾರತಕ್ಕೆ ಆಘಾತ ನೀಡಿತು. ಬಳಿಕ ಕಣಕ್ಕಿಳಿದ ಜಡೇಜಾ(9), ಸೂರ್ಯಕುಮಾರ್(18), ಶಮಿ(6), ಬುಮ್ರಾ(1), ಕುಲ್ದೀಪ್(10) ಹಾಗೂ ಸಿರಾಜ್(9*) ತಂಡಕ್ಕೆ ಆಸರೆಯಾಗಲಿಲ್ಲ. ಇದರ ಪರಿಣಾಮ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು.
ಆಸೀಸ್ ಸಂಘಟಿತ ದಾಳಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್ ಪಡೆಗೆ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿದರು. ನಿರ್ಣಾಯಕ ಘಟ್ಟದಲ್ಲಿ ವಿಕೆಟ್‌ಗಳನ್ನ ಪಡೆದು ತಂಡಕ್ಕೆ ಮೇಲುಗೈ ತಂದುಕೊಡುವಲ್ಲಿ ಯಶಸ್ವಿಯಾದರು. ಪ್ರಮುಖವಾಗಿ ವೇಗಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಹೇಜಲ್ವುಡ್ ಹಾಗೂ ಕಮ್ಮಿನ್ಸ್ 2 ವಿಕೆಟ್ ಪಡೆದರೆ. ಮ್ಯಾಕ್ಸ್‌ವೆಲ್ ಹಾಗೂ ಜ್ಹಂಪ 1 ವಿಕೆಟ್ ಪಡೆದರು.
ಟ್ರಾವಿಸ್ ಹೆಡ್ ಶತಕದ ಮಿಂಚು:
ಭಾರತ ನೀಡಿದ 241 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಆಸ್ಟ್ರೇಲಿಯಾ ಕೂಡ ಆಘಾತಕಾರಿ ಆರಂಭ ಕಂಡಿತು. ಆರಂಭಿಕ ಬ್ಯಾಟರ್ ವಾರ್ನರ್(7), ಮಾರ್ಷ್(15) ಹಾಗೂ ಸ್ಮಿತ್(4) ಅವರುಗಳ ವೈಫಲ್ಯದಿಂದ 47 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಈ ಹಂತದಲ್ಲಿ ಜೊತೆಯಾದ ಟ್ರಾವಿಡ್ ಹೆಡ್(137 ರನ್, 120 ಬಾಲ್, 15 ಬೌಂಡರಿ, 4 ಸಿಕ್ಸ್) ಹಾಗೂ ಮಾರ್ನಸ್ ಲಬುಶೇನ್(58* ರನ್, 110 ಬಾಲ್, 4 ಬೌಂಡರಿ) ಅದ್ಭುತ ಜೊತೆಯಾಟದ ಮೂಲಕ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಲಬುಶೇನ್ ಕೂಡ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸುವ ಮೂಲಕ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯಭೇರಿ ಬಾರಿಸಿತು. ಭಾರತದ ಪರ ಬುಮ್ರಾ 2 ವಿಕೆಟ್ ಪಡೆದರೆ. ಶಮಿ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದುಕೊಂಡರು. ಭರ್ಜರಿ ಬ್ಯಾಟಿಂಗ್‌ನಿಂದ ಆಸೀಸ್ ಗೆಲುವಿನ ಹೀರೋ ಆಗಿ ಮಿಂಚಿದ ಟ್ರಾವಿಸ್ ಹೆಡ್ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಗೆದ್ದುಬೀಗಿದರೆ. ತವರಿನಲ್ಲಿ 3ನೇ ಬಾರಿಗೆ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹೊಂದಿದ್ದ ಭಾರತದ ಕನಸು ಕನಸಾಗಿಯೇ ಉಳಿಯಿತು.
IND v AUS, Team India, Australia, Travis Head, ODI World Cup