ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸ್ಪೋಟಕ ಬ್ಯಾಟಿಂಗ್ನಿಂದ ಮಿಂಚಿದ್ದ ಗ್ಲೆನ್ ಮ್ಯಾಕ್ಸ್ವೆಲ್, ಭಾರತ ವಿರುದ್ಧದ ಟಿ20 ಸರಣಿಗಾಗಿ ಸಜ್ಜಾಗಿದ್ದು, ಈ ಸರಣಿಯಲ್ಲಿ ಟಿ20 ಕ್ರಿಕೆಟ್ನ ಸರ್ವಕಾಲಿಕ ದಾಖಲೆಯೊಂದರ ಸನಿಹದಲ್ಲಿದ್ದಾರೆ.
ಆಸ್ಟ್ರೇಲಿಯಾದ ಪ್ರಮುಖ ಆಲ್ರೌಂಡರ್ ಆಗಿರುವ ಗ್ಲೆನ್ ಮ್ಯಾಕ್ಸ್ವೆಲ್, ಭಾರತದ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟರ್ ಆಗುವ ಎಲ್ಲಾ ಅವಕಾಶಗಳನ್ನ ಹೊಂದಿದ್ದಾರೆ. ಸದ್ಯ ಈ ಲಿಸ್ಟ್ನಲ್ಲಿ 4ನೇ ಸ್ಥಾನದಲ್ಲಿರುವ ಸ್ಪೋಟಕ ಬ್ಯಾಟರ್, ಭಾರತ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 154 ರನ್ಗಳಿಸಿದ್ದೇ ಆದಲ್ಲಿ ಈ ಮಹತ್ವದ ದಾಖಲೆ ಮಾಡುವ ಅವಕಾಶ ಹೊಂದಿದ್ದಾರೆ. ಭಾರತದ ವಿರುದ್ಧ ಈವರೆಗೂ 19 ಟಿ20 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್, 27.37ರ ಸರಾಸರಿ ಹಾಗೂ 141.74ರ ಸ್ಟ್ರೈಕ್ರೇಟ್ನಲ್ಲಿ 438 ರನ್ಗಳಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಒಳಗೊಂಡಿದೆ.
ಸದ್ಯ ಟಿ20 ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಹೆಚ್ಚು ರನ್ಗಳಿಸಿದ ಬ್ಯಾಟರ್ಗಳ ಲಿಸ್ಟ್ನಲ್ಲಿ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಈವರೆಗೂ 20 ಪಂದ್ಯಗಳನ್ನ ಆಡಿರುವ ಪೂರನ್, 32.88ರ ಸರಾಸರಿ, 135.15ರ ಸ್ಟ್ರೈಕ್ರೇಟ್ನಲ್ಲಿ 5 ಅರ್ಧಶತಕಗಳ ನೆರವಿನೊಂದಿಗೆ 592 ರನ್ಗಳಿಸಿದ್ದಾರೆ. ಇವರ ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್(500 ರನ್ಗಳು) ಮತ್ತು ಇಂಗ್ಲೆಂಡ್ನ ಸೀಮಿತ ಓವರ್ಗಳ ತಂಡದ ನಾಯಕ ಜೋಸ್ ಬಟ್ಲರ್(475 ರನ್ಗಳು) ಈ ಲಿಸ್ಟ್ನಲ್ಲಿ ಕ್ರಮವಾಗಿ ಎರಡ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ್ದ ಗ್ಲೆನ್ ಮ್ಯಾಕ್ಸ್ವೆಲ್, ಆಡಿದ 9 ಪಂದ್ಯಗಳಲ್ಲಿ 66.66ರ ಸರಾಸರಿ ಮತ್ತು 150.37ರ ಸ್ಟ್ರೈಕ್ ರೇಟ್ನೊಂದಿಗೆ 400 ರನ್ಗಳಿಸಿದ್ದರು. ಅಲ್ಲದೇ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸ್ಪೋಟಕ ಬ್ಯಾಟಿಂಗ್ನಿಂದ 201* ರನ್ಗಳನ್ನ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಚೇಸಿಂಗ್ ವೇಳೆ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು. ಇದಕ್ಕೂ ಮುನ್ನ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 40 ಬಾಲ್ಗಳಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ನಲ್ಲಿ ವೇಗದ ಶತಕ ಬಾರಿಸಿ ಮಿಂಚಿದ್ದರು.
IND v AUS, Team India, Australia, Glenn Maxwell, T20I Series