ಎದುರಾಳಿ ತಂಡದ ಪರಿಣಾಮಕಾರಿ ಬೌಲಿಂಗ್ ದಾಳಿ ನಡುವೆಯೂ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ 257 ರನ್ಗಳ ಟಾರ್ಗೆಟ್ ನೀಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟೀಂ ಇಂಡಿಯಾದ ಪರಿಣಾಮಕಾರಿ ಬೌಲಿಂಗ್ ದಾಳಿಯ ನಡುವೆಯೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾ ಪಡೆ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ಗಳಿಸಿತು. ಆ ಮೂಲಕ ಭಾರತಕ್ಕೆ 257 ರನ್ಗಳ ಗುರಿ ನೀಡಿದೆ.
ಹಸನ್-ಲಿಟನ್ ಅರ್ಧಶತಕ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಉತ್ತಮ ಆರಂಭ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ತನ್ಜಿದ್ ಹಸನ್(51 ರನ್, 43 ಬಾಲ್, 5 ಬೌಂಡರಿ, 3 ಸಿಕ್ಸ್) ಹಾಗೂ ಲಿಟನ್ ದಾಸ್(66 ರನ್, 82 ಬಾಲ್, 7 ಬೌಂಡರಿ) ಮೊದಲ ವಿಕೆಟ್ಗೆ 93 ರನ್ಗಳ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಿಧಾನಗತಿಯ ಆರಂಭ ಪಡೆದರು ನಂತರ ಲಯ ಕಂಡುಕೊಂಡು, ಜವಾಬ್ದಾರಿಯ ಆಟವಾಡಿದ ಈ ಇಬ್ಬರು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ಆದರೆ ನಂತರದಲ್ಲಿ ಕಣಕ್ಕಿಳಿದ ಹಂಗಾಮಿ ಕ್ಯಾಪ್ಟನ್ ನಜ್ಮುಲ್ ಶ್ಯಾಂಟೊ(8), ಮೆಹಿದಿ ಹಸನ್(3) ಹಾಗೂ ಹ್ರಿದೋಯ್(16) ಬ್ಯಾಟಿಂಗ್ ವೈಫಲ್ಯ ಕಂಡರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಮುಶ್ಫಿಕರ್ ರಹೀಮ್(38) ಹಾಗೂ ಮಹಮದುಲ್ಲಾ(46) ಜವಾಬ್ದಾರಿಯ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಕೆಳ ಕ್ರಮಾಂಕದಲ್ಲಿ ಬಂದ ನಸುಮ್ ಅಹ್ಮದ್(14), ಶೊರಿಫುಲ್ ಇಸ್ಲಾಂ(7*) ಹಾಗೂ ಮುಸ್ತಫಿಜುರ್(1*) ಅಲ್ಪ ಮೊತ್ತ ಕಲೆಹಾಕಿದರು.
ಭಾರತದ ಸಂಘಟಿತ ದಾಳಿ:
ಭಾರತೀಯ ಬೌಲರ್ಗಳು ಶಿಸ್ತುಬದ್ಧ ಬೌಲಿಂಗ್ ಮೂಲಕ ಬಾಂಗ್ಲಾದೇಶ್ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ವೇಗಿ ಜಸ್ಪ್ರೀತ್ ಬುಮ್ರಾ(2/41) ಮತ್ತು ರವೀಂದ್ರ ಜಡೇಜಾ(2/38) ಉತ್ತಮ ಲಯದಲ್ಲಿ ಬೌಲಿಂಗ್ ದಾಳಿ ನಡೆಸಿದರೆ. ಮೊಹಮ್ಮದ್ ಸಿರಾಜ್(2/60), ಶಾರ್ದೂಲ್ ಥಾಕೂರ್(1/59) ಹಾಗೂ ಕುಲ್ದೀಪ್ ಯಾದವ್(1/47) ಉತ್ತಮ ಸಾಥ್ ನೀಡಿದರು.
IND v BAN, Team India, Bangladesh, Hardik Pandya, World Cup