ಪಾಕಿಸ್ತಾನದ ಕ್ಯಾಪ್ಟನ್ ಹಾಗೂ ಪ್ರಮುಖ ಬ್ಯಾಟರ್ ಬಾಬರ್ ಆಜ಼ಂ, ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ವಿರುದ್ಧ ತಮ್ಮ ಮೊದಲ ಅರ್ಧಶತಕ ದಾಖಲಿಸಿದ್ದಾರೆ.
ಅಹ್ಮದಾಬಾದ್ನಲ್ಲಿ ನಡೆದ ಏಕದಿನ ವಿಶ್ವಕಪ್ನ ಭಾರತದ ವಿರುದ್ಧ ಪಂದ್ಯದಲ್ಲಿ ಜವಾಬ್ದಾರಿಯ ಆಟವಾಡಿದ ಬಾಬರ್ ಆಜ಼ಂ, ಅರ್ಧಶತಕ ಬಾರಿಸಿ ಮಿಂಚಿದರು. ಇದು ಪಾಕ್ ತಂಡದ ನಾಯಕ ಭಾರತದ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ದಾಖಲಿಸಿದ ಮೊದಲ ಅರ್ಧಶತಕವಾಗಿದೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಜ಼ಂ, 58 ಬಾಲ್ಗಳಲ್ಲಿ 7 ಬೌಂಡರಿ ನೆರವಿನಿಂದ 50 ರನ್ಗಳಿಸಿದರು. ಆದರೆ ಉತ್ತಮವಾಗಿ ಆಡುವ ನಿರೀಕ್ಷೆ ಮೂಡಿಸಿದ್ದ ಪಾಕ್ ನಾಯಕನಿಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ದಾರಿ ತೋರಿಸಿದರು.
ಏಕದಿನ ಕ್ರಿಕೆಟ್ನಲ್ಲಿ ವಿಶ್ವದ ನಂ.1 ಬ್ಯಾಟರ್ ಆಗಿರುವ ಬಾಬರ್ ಆಜ಼ಂ, ಟೀಂ ಇಂಡಿಯಾ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಂಡಿರಲಿಲ್ಲ. ಭಾರತದ ವಿರುದ್ಧ ಈ ಹಿಂದೆ 7 ಏಕದಿನ ಪಂದ್ಯಗಳನ್ನ ಆಡಿದ್ದ ಬಾಬರ್ ಆಜ಼ಂ, ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಕೇವಲ 28ರ ಸರಾಸರಿಯಲ್ಲಿ ರನ್ಗಳಿಸಿದ್ದ ಬಾಬರ್, ಇದೀಗ ಭಾರತ ವಿರುದ್ದದ 8ನೇ ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕ ಬಾರಿಸಿದರು.
ಅಲ್ಲದೇ ಇದು ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಬಾಬರ್ ಆಜ಼ಂ ಅವರ ಬ್ಯಾಟ್ನಿಂದ ಬಂದ ಮೊದಲ ಅರ್ಧಶತಕವಾಗಿದೆ. ಟೂರ್ನಿಯಲ್ಲಿ ಈ ಹಿಂದೆ ನೆದರ್ಲೆಂಡ್ಸ್ ವಿರುದ್ಧ 5 ರನ್ ಹಾಗೂ ಶ್ರೀಲಂಕಾ ವಿರುದ್ಧ ಕೇವಲ 10 ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು.
IND v PAK, Pakistan, Babar Azam, Team India, ODI Cricket








