ಮೊಹಮ್ಮದ್ ಶಮಿ(5/18), ಮೊಹಮ್ಮದ್ ಸಿರಾಜ್(3/16) ಅವರುಗಳ ಆಕ್ರಮಣಕಾರಿ ಬೌಲಿಂಗ್ ಹಾಗೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಭಾರತ 302 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿತು.
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 50 ಓವರ್‌ಗಳಲ್ಲಿ 357/8 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ, ಬ್ಯಾಟ್ಸಮನ್‌ಗಳ ವೈಫಲ್ಯದಿಂದಾಗಿ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಈ ಗೆಲುವಿನೊಂದಿಗೆ ರೋಹಿತ್ ಶರ್ಮ ಸಾರಥ್ಯದ ಟೀಂ ಇಂಡಿಯಾ, ಪ್ರಸಕ್ತ ಏಕದಿನ ವಿಶ್ವಕಪ್‌ನ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಗಿಲ್, ಕೊಹ್ಲಿ, ಶ್ರೇಯಸ್ ಅಬ್ಬರ:
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮ(4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆದರೆ 2ನೇ ವಿಕೆಟ್‌ಗೆ ಜೊತೆಯಾದ ಶುಭ್ಮನ್ ಗಿಲ್(92 ರನ್, 92 ಬಾಲ್, 11 ಬೌಂಡರಿ, 2 ಸಿಕ್ಸ್) ಹಾಗೂ ವಿರಾಟ್ ಕೊಹ್ಲಿ(88 ರನ್, 94 ಬಾಲ್, 11 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಲಂಕಾದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 189 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಬಳಿಕ 2ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್(82 ರನ್, 56 ಬಾಲ್, 3 ಬೌಂಡರಿ, 6 ಸಿಕ್ಸ್) ಸ್ಪೋಟಕ ಬ್ಯಾಟಿಂಗ್‌ನಿಂದ ತಂಡದ ಮೊತ್ತವನ್ನ 350ರ ಗಡಿದಾಟುವಂತೆ ಮಾಡಿದರು. ಉಳಿದಂತೆ ರವೀಂದ್ರ ಜಡೇಜಾ(35), ಕೆಎಲ್ ರಾಹುಲ್(21), ಸೂರ್ಯಕುಮಾರ್ ಯಾದವ್(12) ರೋಹಿತ್ ಶರ್ಮ(4) ಮೊಹಮ್ಮದ್ ಶಮಿ(2) ಉಪಯುಕ್ತ ರನ್‌ಗಳಿಸಿದರು. ಶ್ರೀಲಂಕಾ ಪರ ಚಾಣಾಕ್ಷ ಬೌಲಿಂಗ್ ದಾಳಿ ನಡೆಸಿದ ಮಧುಶಂಕ(5/80) ಅದ್ಭುತ ಬೌಲಿಂಗ್‌ನಿಂದ ಮಿಂಚಿದರೆ. ಚಮೀರಾ ಏಕೈಕ ವಿಕೆಟ್ ಪಡೆದುಕೊಂಡರು.
ಭಾರತದ ಬೌಲಿಂಗ್ ಕಮಾಲ್:
ಭಾರತದ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನದಿಂದ ಮಿಂಚಿದರೆ. ಬೌಲರ್‌ಗಳು ಸಹ ಆಕ್ರಮಣಕಾರಿ ಬೌಲಿಂಗ್‌ನಿಂದ ಶ್ರೀಲಂಕಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಿಂದ ಲಂಕಾ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಪ್ರಮುಖವಾಗಿ ಜಸ್ಪ್ರೀತ್ ಬುಮ್ರ(1/8) ಲಂಕಾ ಬ್ಯಾಟಿಂಗ್ ವೈಫಲ್ಯಕ್ಕೆ ಮುನ್ನಡಿ ಬರೆದರೆ. ನಂತರ ಮೊಹಮ್ಮದ್ ಶಮಿ(5/18), ಮೊಹಮ್ಮದ್ ಸಿರಾಜ್(3/16) ಅತ್ಯುತ್ತಮ ದಾಳಿ ನಡೆಸಿದರು. ಉಳಿದಂತೆ ರವೀಂದ್ರ ಜಡೇಜಾ(1/4) ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಲಂಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದ ಮೊಹಮ್ಮದ್ ಶಮಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸೆಮೀಸ್‌ಗೆ ಮೊದಲ ಎಂಟ್ರಿ:
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಅಜೇಯ ಗೆಲುವಿನ ಓಟ ಮುಂದುವರಿಸಿರುವ ಭಾರತ, ಸತತ 7 ಪಂದ್ಯಗಳಲ್ಲಿ ಗೆದ್ದುಬೀಗಿದೆ. ಈ ಗೆಲುವಿನೊಂದಿಗೆ ಆಡಿರುವ 7 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಪಾಯಿಂಟ್ಸ್ ಪಡೆಯುವ ಮೂಲಕ ಟೂರ್ನಿಯ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
IND v SL, Team India, Sri Lanka, Mohammad Shami, Mohammad Siraj, ODI Cricket