ವೆಸ್ಟ್ ಇಂಡೀಸ್ ವಿರುದ್ಧ ಜುಲೈನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದ್ದು, ಅಜಿಂಕ್ಯಾ ರಹಾನೆ ಅವರನ್ನ ತಂಡದ ಉಪ-ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಟೀಂ ಇಂಡಿಯಾದ ಅನುಭವಿ ಬ್ಯಾಟರ್ ಆಗಿರುವ ಅಜಿಂಕ್ಯಾ ರಹಾನೆ, ಪ್ರಸಕ್ತ ವರ್ಷದ ಆರಂಭದಲ್ಲಿ ಫಾರ್ಮ್ ಕೊರತೆಯ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೇರಿದಂತೆ ಬರೋಬ್ಬರಿ 16 ತಿಂಗಳು ಟೆಸ್ಟ್ ತಂಡದಿಂದ ಹೊರಗುಳಿದಿದ್ದರು. ಆದರೆ ರಣಜಿ ಟ್ರೋಫಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ ರಹಾನೆ, ನಿರೀಕ್ಷೆಯಂತೆ ಇತ್ತೀಚೆಗೆ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಅಲ್ಲದೇ ಲಂಡನ್‌ನ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪ್ರಮುಖ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 86 ಹಾಗೂ 48 ರನ್‌ಗಳಿಸಿದ್ದ ರಹಾನೆ, ಭಾರತ ತಂಡಕ್ಕೆ ಆಸರೆಯಾಗಿದ್ದರು. ಇವರ ಈ ಪ್ರದರ್ಶನದ ಮೂಲಕ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ರಹಾನೆ, ಭಾರತ ಟೆಸ್ಟ್ ತಂಡದ ಉಪ-ನಾಯಕ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಅಜಿಂಕ್ಯಾ ರಹಾನೆ, ಈ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ತಂಡದ ಉಪ-ನಾಯಕನಾಗಿದ್ದರು. ಆದರೆ 2021ರ ಸೌತ್ ಆಫ್ರಿಕಾ ಪ್ರವಾಸದ ವೇಳೆ ಉಪ-ನಾಯಕನ ಸ್ಥಾನ ಕಳೆದುಕೊಂಡಿದ್ದ ರಹಾನೆ, ಈ ಸ್ಥಾನವನ್ನ ರೋಹಿತ್ ಶರ್ಮ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಈ ಎಲ್ಲಾ ಏರಿಳಿತಗಳ ನಡುವೆಯೂ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿರುವ ಅಜಿಂಕ್ಯಾ ರಹಾನೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಜೊತೆಗೆ ಉಪ ನಾಯಕನ ಜವಾಬ್ದಾರಿ ಸಹ ಪಡೆದಿದ್ದಾರೆ.








