IND vs AUS 4th T20I : ರಿಚಾ ಘೋಷ್-ಹರ್ಮನ್‌ಪ್ರೀತ್ ವ್ಯರ್ಥ ಹೋರಾಟ – ಆಸ್ಟ್ರೇಲಿಯಾಕ್ಕೆ ಜಯ
ನಾಯಕಿ ಹರ್ಮನ್‌ಪ್ರೀತ್ ಕೌರ್(48) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಚಾ ಘೋಷ್(40*) ಅವರ ಹೋರಾಟದ ನಡುವೆಯೂ ಆಸ್ಟ್ರೇಲಿಯಾ ವಿರುದ್ಧದ 4ನೇ T20Iನಲ್ಲಿ ಭಾರತ 7 ರನ್‌ಗಳ ಸೋಲು ಕಂಡಿತು.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 188 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.
ಟಾರ್ಗೆಟ್ ಚೇಸ್ ಮಾಡಿದ ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 181 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆ ಪಡೆದ ಆಸೀಸ್ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿ ತನ್ನದಾಗಿಸಿಕೊಂಡಿತು.
ಎಲ್ಲಿಸ್ ಪೆರ್ರಿ ಅದ್ಭುತ ಆಟ
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್ ಆಗಿ ಬಂದ ನಾಯಕಿ ಅಲಿಸ್ಸಾ ಹೀಲಿ(30) ರನ್‌ಗಳಿಸಿ ರಿಟರ್ಡ್ ಹರ್ಟ್ ಆಗಿ ಹೊರ ನಡೆದರು. ಇವರ ನಡುವೆಯೇ ಆರಂಭಿಕ ಆಟಗಾರ್ತಿ ಬೆತ್ ಮೋನಿ(2) ಹಾಗೂ ತಾಲಿಯಾ ಮೆಕ್‌ಗ್ರಾಥ್(9) ತಂಡಕ್ಕೆ ಆಸರೆಯಾಗಲಿಲ್ಲ.
ನಂತರ ಬಂದ ಆಶ್ಲೀ ಗಾರ್ಡ್ನರ್(42) ರನ್‌ಗಳ ಉಪಯುಕ್ತ ರನ್‌ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ(72 ರನ್‌ಗಳು, 42 ಬಾಲ್, 7 ಬೌಂಡರಿ, 4 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಗ್ರೇಸ್ ಹ್ಯಾರಿಸ್(27* ರನ್‌ಗಳು, 12 ಬಾಲ್) ಬಿರುಸಿನ ಆಟವಾಡಿದರು. ಪರಿಣಾಮ ಆಸೀಸ್ 20 ಓವರ್‌ಗಳಲ್ಲಿ 188/3 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಭಾರತದ ಪರ ದೀಪ್ತಿ ಶರ್ಮ 2, ರಾಧಾ ಯಾದವ್ 1 ವಿಕೆಟ್ ಪಡೆದರು.
ಕೌರ್-ಘೋಷ್ ಹೋರಾಟ
ಆಸೀಸ್ ನೀಡಿದ 189 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತಕ್ಕೆ ಅಗ್ರಕ್ರಮಾಂಕದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ಆರಂಭಿಕರಾದ ಸ್ಮೃತಿ ಮಂದಾನ(16) ಹಾಗೂ ಶಿಫಾಲಿ ವರ್ಮ(20) ರನ್‌ಗಳಿಸಿ ಹೊರ ನಡೆದರೆ.
ನಂತರ ಬಂದ ಜಮೈಮಾ ರೋಡ್ರಿಗಸ್(8) ಸಹ ನಿರೀಕ್ಷಿತ ಆಟವಾಡಲಿಲ್ಲ. ಆದರೆ ಈ ಹಂತದಲ್ಲಿ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್(48) ಹಾಗೂ ದೇವಿಕಾ ವಿದ್ಯಾ(32) ರನ್‌ಗಳಿಸಿ ತಂಡಕ್ಕೆ ಆಸರೆಯಾದರು.
ಆದರೆ ರಿಚಾ ಘೋಷ್(40* ರನ್‌ಗಳು, 19 ಬಾಲ್, 4 ಬೌಂಡರಿ, 2 ಸಿಕ್ಸ್) ಕೊನೆಯವರೆಗೂ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು ಪ್ರಯೋಜನವಾಗಲಿಲ್ಲ. ಹೀಗಾಗಿ ಭಾರತ 20 ಓವರ್‌ಗಳಲ್ಲಿ 181/5 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಆಶ್ಲೀ ಗಾರ್ಡ್ನರ್ ಹಾಗೂ ಅಲನಾ ಕಿಂಗ್ ತಲಾ 2 ವಿಕೆಟ್ ಪಡೆದು ಮಿಂಚಿದರು.