IND vs SL : ಕೊಹ್ಲಿ, ಗಿಲ್ , ಸಿರಾಜ್ ಭರ್ಜರಿ ಆಟ
ಭಾರತಕ್ಕೆ 317 ರನ್‌ಗಳ ಭರ್ಜರಿ ಜಯ
ರನ್ ಮಷಿನ್ ವಿರಾಟ್ ಕೊಹ್ಲಿ(166*) ಹಾಗೂ ಶುಭ್ಮನ್ ಗಿಲ್(116) ಅವರ ಶತಕದ ಅಬ್ಬರ ಹಾಗೂ ಮೊಹಮ್ಮದ್ ಸಿರಾಜ್(4/32) ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ಅಮೋಘ ಆಟದಿಂದ ಮಿಂಚಿದರು. ಪರಿಣಾಮ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲನ್ನ ಚೇಸ್ ಮಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯನ್ನ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ಕೊಹ್ಲಿ-ಗಿಲ್ ಶತಕದ ಅಬ್ಬರ :
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು.
ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್, 97 ಬಾಲ್‌ಗಳಲ್ಲಿ 14 ಬೌಂಡರಿ, 2 ಸಿಕ್ಸ್ ನೆರವಿನಿಂದ 116 ರನ್‌ಗಳಿಸಿದರೆ.
ಇನ್ನಿಂಗ್ಸ್‌ನ ಕೊನೆಯವರೆಗೂ ಅಬ್ಬರದ ಆಟವಾಡಿದ ವಿರಾಟ್ ಕೊಹ್ಲಿ, 110 ಬಾಲ್‌ಗಳಲ್ಲಿ 13 ಬೌಂಡರಿ ಹಾಗೂ 8 ಸಿಕ್ಸ್ ಮೂಲಕ ಅಜೇಯ 166 ರನ್‌ಗಳಿಸಿ ಮಿಂಚಿದರು.
ಇದರೊಂದಿಗೆ ಕೊಹ್ಲಿ ತಮ್ಮ ವೃತ್ತಿ ಜೀವನದ 46ನೇ ಶತಕ ದಾಖಲಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮ(42), ಶ್ರೇಯಸ್ ಅಯ್ಯರ್(38), ರಾಹುಲ್(7), ಸೂರ್ಯಕುಮಾರ್(4) ಹಾಗೂ ಅಕ್ಸರ್(2*) ರನ್‌ಗಳಿಸಿದರು. ಶ್ರೀಲಂಕಾ ಪರ ರಜಿತ ಹಾಗೂ ಲಹಿರು ಕುಮಾರ ತಲಾ 2 ವಿಕೆಟ್ ಪಡೆದರು.
ಸಿರಾಜ್ ಮಿಂಚಿನ ದಾಳಿ :
ಭಾರತ ನೀಡಿದ 391 ರನ್‌ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಇನ್ನಿಂಗ್ಸ್ ಆರಂಭದಿಂದ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಿದ ಮೊಹಮ್ಮದ್ ಸಿರಾಜ್(4/32) ಲಂಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಪ್ರವಾಸಿ ತಂಡದ ಪರ ನವನಿದು ಫರ್ನಾಂಡೋ(19), ಕಸುನ್ ರಜಿತ(13*) ಹಾಗೂ ದಸುನ್ ಶನಕ(11) ರನ್‌ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕ್ಕಿಯ ಮೊತ್ತ ಕಲೆಹಾಕಲಿಲ್ಲ.
ಭಾರತದ ಪರ ಸಿರಾಜ್ 4 ವಿಕೆಟ್ ಪಡೆದರೆ, ಶಮಿ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಪಡೆದರು.
ಅಂತಿಮ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಜೊತೆಗೆ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿದರು.








