ಭಾರತ – ಚೀನಾ ಗಡಿ ಮಧ್ಯಸ್ಥಿಕೆಗೆ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ – ಚೀನಾ
ಹೊಸದಿಲ್ಲಿ, ಮೇ 30: ಭಾರತ – ಚೀನಾ ಗಡಿ ವಿಚಾರವಾಗಿ ತಲೆದೋರಿರುವ ಗಡಿವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಅಮೆರಿಕದ ಪ್ರಸ್ತಾಪವನ್ನು ಚೀನಾ ಶುಕ್ರವಾರ ತಿರಸ್ಕರಿಸಿದೆ.
ಅಮೆರಿಕಾ ಅಧ್ಯಕ್ಷರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಪ್ರಸ್ತುತ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾ ಮತ್ತು ಭಾರತದ ನಡುವೆ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಗಡಿ ಸಂಬಂಧಿತ ಕಾರ್ಯವಿಧಾನ ಮತ್ತು ಸಂವಹನ ಮಾರ್ಗಗಳಿವೆ. ಸಂಭಾಷಣೆ ಮತ್ತು ಸಮಾಲೋಚನೆಯ ಮೂಲಕ ನಮ್ಮ ನಡುವಿನ ಬಿಕ್ಕಟ್ಟನ್ನು ಸರಿಯಾಗಿ ಬಗೆಹರಿಸಲು ಉಭಯ ದೇಶಗಳು ಸಮರ್ಥರಾಗಿದ್ದೇವೆ. ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಚೀನಾದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ಸೇನೆಗಳ ನಡುವಿನ ಸಿಕ್ಕಿಂ ಗಡಿಯ ಬಳಿ ಚಕಮಕಿ ಹಿನ್ನಲೆಯಲ್ಲಿ ಅಮೆರಿಕ ಭಾರತ – ಚೀನಾ ಗಡಿ ವಿವಾದ ಬಗೆಹರಿಸಲು ಎರಡೂ ದೇಶಗಳು ಬಯಸಿದ್ದರೆ ತಾನು ಸಿದ್ಧವಿರುವುದಾಗಿ ಹೇಳಿಕೊಂಡಿತ್ತು. ಅದಕ್ಕೆ ಭಾರತ, ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಚೀನಾದೊಂದಿಗೆ ಈಗಾಗಲೇ ಮಾತುಕತೆಯಲ್ಲಿ ತೊಡಗಿರುವುದಾಗಿ ಉತ್ತರ ನೀಡಿತ್ತು.
ಎರಡು ವಾರಗಳಿಂದ ಭಾರತ – ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದ್ದು ಎರಡೂ ಭಾಗಗಳಲ್ಲೂ ಗಡಿಯಲ್ಲಿನ ಭದ್ರತೆ ಬಲಪಡಿಸುವಿಕೆ ಕೆಲಸ ನಡೆಯುತ್ತಿದೆ. ಲಡಾಖ್ ಮತ್ತು ಸಿಕ್ಕಿಂನಲ್ಲಿನ ಎಲ್.ಎ.ಸಿ ಉದ್ದಕ್ಕೂ ಚೀನಾದ ಮಿಲಿಟರಿ ಸೈನ್ಯ ಗಸ್ತು ತಿರುಗುತ್ತಲಿದ್ದು ಇದಕ್ಕೆ ಭಾರತ ಆಕ್ಷೇಪಿಸಿದೆ. ಚೀನಾ ಭಾರತದ ಕಡೆ ಬೊಟ್ಟು ಮಾಡಿದ್ದು ಭಾರತೀಯ ಪಡೆಗಳು ಚೀನಾ ಗಡಿಯಲ್ಲಿ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದೆ. ಆದರೆ ಭಾರತ ಇದನ್ನು ಅಲ್ಲಗಳೆದಿದೆ.








