ವಾಷಿಂಗ್ಟನ್ : ಭಾರತ ಮತ್ತು ಚೀನಾ ನಡುವೆ ಗಡಿ ವಿಚಾರದಲ್ಲಿ ಉಂಟಾದ ಸಂಘರ್ಷವನ್ನು ಬಗೆಹರಿಸಲು ಅಮೆರಿಕ ಎರಡೂ ದೇಶಗಳೊಂದಿಗೆ ಮಾತನಾಡುವ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ಎರಡು ದೇಶಗಳ ಮಧ್ಯೆ ಮತ್ತಷ್ಟು ಶೀತಲ ಸಮರಕ್ಕೆ ಕಾರಣವಾಗಿದೆ. ಚೀನಾ ದಾಳಿಯಿಂದ ಭಾರತ 20 ಯೋಧರ ಹುತಾತ್ಮರಾಗಿದ್ದಾರೆ. ಚೀನಾ 35ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ಹಾಗಾಗಿ ಎರಡು ದೇಶಗಳ ನಡುವೆ ಕಾಳಗ ನಡೆಯುವ ಮುನ್ಸೂಚನೆ ಬಂದಿತ್ತು. ಇದಾದ ಬಳಿಕ ಮತ್ತೆ ಮಾತುಕತೆ ಮುಂದುವರೆಸಲಾಗಿದೆ.
ಇದೆ ಹೊತ್ತಿನಲ್ಲಿ ಅಮೆರಿಕಾ ಎರಡು ದೇಶಗಳಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದೆ. ಈ ವಿಚಾರವಾಗಿ ಶ್ವೇತಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ- ಚೀನಾ ಕಠಿಣ ಪರಿಸ್ಥಿತಿಯಲ್ಲಿವೆ. ನಾವು, ಭಾರತ ಮತ್ತು ಚೀನಾದ ಜೊತೆಗೆ ಮಾತನಾಡುತ್ತಿದ್ದೇವೆ. ಗಡಿಯಲ್ಲಿ ಬಹಳ ಸಮಸ್ಯೆಯಾಗಿದೆ.ಮುಂದೆ ಏನಾಗುತ್ತದೆ ನೋಡೋಣ, ಸಾಧ್ಯವಾದಷ್ಟು ಮಟ್ಟಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.








