ಅಫ್ಘಾನಿಸ್ತಾನ್ ಭೂಕಂಪ – ನೆರೆಯ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿದ ಭಾರತ…
ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅಪಾರ ಪ್ರಮಾಣದಲ್ಲಿ ಆಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ ಅಫ್ಘನ್ ಜನರ ನರೆವಿಗೆ ಭಾರತ ನಿಂತಿದ್ದು, ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಭೂಕಂಪದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರು ಹಾಗೂ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಭಾರತ ಸರ್ಕಾರ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನ ಜನರಿಗೆ ಸಹಾಯ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದರು.
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅಫ್ಘಾನಿಸ್ತಾನದ ಸಹಾಯಕ್ಕಾಗಿ ಈಗಾಗಲೇ ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲಾಗಿದೆ. ಮೊದಲ ರವಾನೆಯು ಕಾಬೂಲ್ ತಲುಪಿದೆ ಎಂದರು. ಟೆಂಟ್ ಗಳು, ಹೊದಿಕೆಗಳು ಬಟ್ಟೆ ಸೇರಿ ಅಗತ್ಯ ಪರಿಕರಗಳನ್ನ ಕಳುಹಿಸಲಾಗಿದೆ. ಪರಿಹಾರ ಸರಕನ್ನು ಕಾಬೂಲ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು.
ಭಾರತವು ಈಗಾಗಲೇ 30,000 ಮೆಟ್ರಿಕ್ ಟನ್ ಗೋಧಿ, 13 ಟನ್ ಔಷಧಗಳು ಮತ್ತು 5 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ.







