ಕೊಲಂಬೊ: ಶ್ರೀಲಂಕಾ (Sri Lanka) ತಂಡವು ಭಾರತ ತಂಡದ (Team India) ವಿರುದ್ಧ 32 ರನ್ ಗಳ ಭರ್ಜರಿ ಜಯ ಸಾಧಿಸಿದೆ.
2ನೇ ಏಕದಿನ ಸರಣಿಯ ಪಂದ್ಯದಲ್ಲಿ 208 ರನ್ ಗಳಿಗೆ ಭಾರತ ಆಲೌಟ್ ಆಗಿ ಲಂಕಾ ಎದುರು ಹೀನಾಯ ಸೋಲು ಕಂಡಿದೆ. ನಾಯಕ ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹೊರತುಪಡಿಸಿ ಭಾರತದ ಯಾವೊಬ್ಬ ಆಟಗಾರರು ಪ್ರತಿರೋಧ ಒಡ್ಡಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು. 241 ರನ್ ಗುರಿ ಬೆನ್ನತ್ತಿದ ಭಾರತ ತಂಡ 42.2 ಓವರ್‌ಗೆ 208 ರನ್ ಗಳಿಸಿ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.
ಲಂಕಾ ಪರ ಅವಿಷ್ಕಾ ಫರ್ನಾಂಡೋ 40, ಕಾಮಿಂದು ಮೆಂಡಿಸ್ 40, ದುನಿತ್ ವೆಲ್ಲಲಾಗೆ 39, ಕುಸಾಲ್ ಮೆಂಡಿಸ್ 30, ಚರಿತ್ ಅಸಲಂಕಾ 25 ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಕಿತ್ತರು. ಉಳಿದಂತೆ ಕುಲದೀಪ್ ಯಾದವ್ 2, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಬ್ಯಾಟಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭ ಪಡೆದುಕೊಂಡರು. ಶರ್ಮಾ ಅರ್ಧಶತಕ ಬಾರಿಸಿ (64 ರನ್, 44 ಬಾಲ್, 5 ಫೋರ್, 4 ಸಿಕ್ಸರ್) ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು. ಗಿಲ್ 35 ಹಾಗೂ ಅಕ್ಷರ್ ಪಟೇಲ್ 44 ರನ್ ಗಳಿಸಿದ್ದು ಬಿಟ್ಟರೆ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಕ್ರೀಸ್ ನಲ್ಲಿ ಉಳಿಯಲಿಲ್ಲ.
ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು. ಕೆ.ಎಲ್.ರಾಹುಲ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಪರಿಣಾಮವಾಗಿ ಭಾರತ 208 ರನ್ ಗಳಿಗೆ ಸರ್ವಪತನ ಕಂಡು ಸೋಲಿನ ಕಹಿ ಅನುಭವಿಸಿತು.