ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಬದ್ಧ ವೈರಿಗಳಾದ ಭಾರತ ಹಾಗೂ ಪಾಕ್ ಜೂ.9 ರಂದು ಮುಖಾಮುಖಿಯಾಗಲಿವೆ. ಈ ಹೈ ವೋಲ್ಟೇಜ್ ಪಂದ್ಯಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇದರ ಮಧ್ಯೆ ಬೆದರಿಕೆಯ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ.
ನ್ಯೂಯಾರ್ಕ್ ನ ಐಸೆನ್ ಹೋವರ್ ಪಾರ್ಕ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ನ್ಯೂಯಾರ್ಕ್‌ನ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ.
ಐಸೆನ್‌ಹೋವರ್ ಪಾರ್ಕ್ ಕ್ರೀಡಾಂಗಣವು ಜೂನ್ 3 ರಿಂದ 12 ರ ವರೆಗೆ ಎಂಟು ICC T20 WC ಪಂದ್ಯಗಳ ಆತಿಥ್ಯ ವಹಿಸುತ್ತದೆ. ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆಗಳು ಸೇರಿದಂತೆ ಉನ್ನತ ಭದ್ರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೊಚುಲ್ ತಿಳಿಸಿದ್ದಾರೆ.
ಜೂ.5 ರಂದು ಐರ್ಲೆಂಡ್ ವಿರುದ್ಧ, ಜೂ.9 ಕ್ಕೆ ಪಾಕಿಸ್ತಾನ, ಜೂ.12 ರಂದು ಯುಎಸ್‌ಎ ಹಾಗೂ ಜೂ.15 ಕ್ಕೆ ಕೆನಡಾ ತಂಡಗಳ ವಿರುದ್ಧ ಭಾರತ ತಂಡ ಹೋರಾಟ ನಡೆಸಲಿದೆ.