ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲುವ ಮೂಲಕ ಕೆಟ್ಟ ದಾಖಲೆಗೆ ಸಾಕ್ಷಿಯಾಗಿದೆ.
ಶ್ರೀಲಂಕಾ ತಂಡವು ಭಾರತದ ವಿರುದ್ಧ 110 ರನ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ 27 ವರ್ಷಗಳಲ್ಲಿ ಲಂಕಾ ವಿರುದ್ಧ ಭಾರತಕ್ಕೆ ಮೊದಲ ಸರಣಿ ಸೋಲು ಸಿಕ್ಕಿದೆ. 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವನ್ನು 110 ರನ್ ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.
ಶ್ರೀಲಂಕಾ ನೀಡಿದ 249 ರನ್ ಗಳ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡವು 26.1 ಓವರ್ ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಗುವ ಮೂಲಕ 110 ರನ್ ಗಳಿಂದ ಸೋಲು ಕಂಡಿತು. ಚೇಸಿಂಗ್ ಆರಂಭಿಸಿದ ಭಾರತ ಆರಂಭದಿಂದಲೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ಭಾರತದ ಪರ ರೋಹಿತ್ ಶರ್ಮಾ 35 ರನ್ (20 ಎಸೆತ, 6 ಬೌಂಡರಿ, 1 ಸಿಕ್ಸರ್), ವಾಷಿಂಗ್ಟನ್ ಸುಂದರ್ ಕೊನೆಯಲ್ಲಿ 30 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯೂರೂ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಭಾರತ ಹೀನಾಯ ಸೋಲು ಕಾಣುವಂತಾಯಿತು.
ವಿರಾಟ್ ಕೊಹ್ಲಿ ಸಹ ಕೇವಲ 20 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶುಭಮನ್ ಗಿಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರಿಯಾನ್ ಪರಾಗ್ ಸಹ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಹೀಗಾಗಿ ಭಾರತ ಮೂರನೇ ಪಂದ್ಯವನ್ನೂ ಸೋತು ಸರಣಿ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಉತ್ತಮ ಆರಂಭ ಪಡೆಯಿತು. ಪಥುಮ್ ನಿಸ್ಸಾಂಕ, ಆವಿಷ್ಕ ಫರ್ನಾಂಡೋ ಹಾಗೂ ಕುಶಾಲ್ ಮೆಂಡಿಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಲಂಕಾ 3 ವಿಕೆಟ್ಗೆ 183 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ನಂತರ ಬಂದ ಬ್ಯಾಟರ್ಗಳು ಭಾರತೀಯ ಬೌಲರ್ಗಳ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 248 ರನ್ ಗಳಿಸುವಂತಾಯಿತು.
ಭಾರತದ ಪರ ರಿಯಾನ್ ಪರಾಗ್ 3 ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಅವರು ತಲಾ ಒಂದು ವಿಕೆಟ್ ಪಡೆದರು.