India Vs Afghanistan Asia Cup: ಗೆಲುವಿನೊಂದಿಗೆ ಪ್ರವಾಸ ಮುಗಿಸುವ ಇರಾದೆಯಲ್ಲಿ ಭಾರತ, ಅಫ್ಘಾನ್…
ಇಂದು ಭಾರತ ತಂಡ ದುಬೈ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ತನ್ನ ಏಷ್ಯಾಕಪ್ ಸರಣಿಯ ಕೊನೆಯ ಪಂದ್ಯವನ್ನ ಆಡಲಿದೆ. ಈ ಹಿಂದೆ ಏಷ್ಯಾಕಪ್‌ನಲ್ಲಿ ಸೂಪರ್-4 ಹಂತದಲ್ಲಿ 2 ಪಂದ್ಯಗಳನ್ನು ಸೋತು ಅಂತಿಮ ರೇಸ್ ನಿಂದ ಹೊರಬಿದ್ದಿರುವ ಟೀಮ್ ಇಂಡಿಯಾ ಇಂದು ಇದೇ ಪರಿಸ್ಥಿತಿಯಲ್ಲಿರುವ ಅಫ್ಘಾನ್ ತಂಡವನ್ನ ಎದುರಿಸಲಿದೆ.
ಭಾರತ ತಂಡದ ಹಲವು ಆಟಗಾರರ ಫಾರ್ಮ್ ಕಂಡುಕೊಳ್ಳದೆ ಇರುವುದು ಸೋಲಿಗೆ ದೊಡ್ಡ ಕಾರಣ. ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳ ವಿಫಲ , ಮತ್ತೊಂದೆಡೆ, ವೇಗದ ಬೌಲರ್‌ಗಳ ಕಳಪೆ ಪ್ರದರ್ಶನ ಭಾರತದ ಸೋಲಿಗೆ ಕಾರಣವಾಗಿದೆ.
ಅಫ್ಘಾನಿಸ್ತಾನ ತಂಡ ಕೂಡ ಬುಧವಾರ ಪಾಕಿಸ್ತಾನಕ್ಕೆ ಕಠಿಣ ಹೋರಾಟ ನೀಡಿತ್ತು. ಆದಾಗ್ಯೂ, 1 ವಿಕೆಟ್‌ನಿಂದ ಪಂದ್ಯ ಕಳೆದುಕೊಂಡಿತು. ಆದರೆ ಅದಕ್ಕೂ ಮೊದಲು ಅಫ್ಘಾನ್ ಏಷ್ಯಾಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿತ್ತು. ಏಷ್ಯಾಕಪ್‌ನಲ್ಲಿ ಇದು ಸಹ ಅಫ್ಘಾನಿಸ್ತಾನದ ಕೊನೆಯ ಪಂದ್ಯವಾಗಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಈ ಸೂಪರ್ 4 ಪಂದ್ಯವನ್ನು ಎರಡೂ ತಂಡಗಳ ಅಭಿಮಾನಿಗಳು ವೀಕ್ಷಿಸಬಹುದು. Hotstar ಈ ಪಂದ್ಯವನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡುತ್ತದೆ.
ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಒಂದೇ ರೀತಿಯ ಕಥೆಯನ್ನು ಹೊಂದಿವೆ. ಏಷ್ಯಾದ ಎರಡೂ ತಂಡಗಳು ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದವು. ಗ್ರೂಪ್ ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳನ್ನು ಸೋಲಿಸಿತ್ತು. ಮತ್ತೊಂದೆಡೆ, ಅಫ್ಘಾನಿಸ್ತಾನವು ಗುಂಪು ಹಂತದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿತು. ಸೂಪರ್ 4 ರಲ್ಲಿ, ಈ ತಂಡಗಳು ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ. ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆಯಲು ಬಯಸುತ್ತವೆ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಪರಸ್ಪರ ಒಟ್ಟು 3 ಪಂದ್ಯಗಳನ್ನು ಆಡಿವೆ. ಈ ಮೂರೂ ಪಂದ್ಯಗಳಲ್ಲಿ ಭಾರತ ಅಫ್ಘಾನಿಸ್ತಾನವನ್ನು ಸೋಲಿಸಿದೆ. ಭಾರತ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದು ಸರಣಿ ಪ್ರವಾಸವನ್ನ ಮುಗಿಸುವ ಇಂಗಿತದಲ್ಲಿದೆ.
ಯುಎಇಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಬಾರಿಯ ಏಷ್ಯಾಕಪ್‌ನ ದುಬೈ ಪಿಚ್ ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಹೆಚ್ಚಾಗಿ ನಿರಾಸೆಯನ್ನು ಎದುರಿಸಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ.