IND vs PAK | ಕ್ರಿಕೆಟ್ ಅಭಿಮಾನಿಗಳಿಗೆ ಇಂಡೋ-ಪಾಕ್ ಪಂಚ್ ಕಜ್ಜಾಯ..!!
ಇಂಡೋ – ಪಾಕ್ ಪಂದ್ಯ ಅಂದ್ರೆ ಅಲ್ಲಿ ರೋಷಾವೇಶ.. ರೋಚಕ ಕ್ಷಣಗಳು.. ಆಟಗಾರರ ಕಿರಿಕ್ ಎಲ್ಲವೂ ಇದ್ದೇ ಇರುತ್ತದೆ. ಹೀಗಾಗಿಯೇ ಟೀಂ ಇಂಡಿಯಾ ವರ್ಸಸ್ ಪಾಕಿಸ್ಥಾನ್ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ಕಾಯುತ್ತಿರುತ್ತದೆ.
ಇದಕ್ಕೆ ಮತ್ತೊಂದು ಪ್ರಮುಖ ಕಾರಣ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಮೈದಾನದ ಕಡುಬದ್ಧ ವೈರಿಗಳಾಗಿರೋದು. ಅಲ್ಲದೇ ಎರಡೂ ತಂಡಗಳು ಸೋಲನ್ನ ಸುಲಭವಾಗಿ ಒಪ್ಪದೇ ಇರೋದು.
ಅದರಲ್ಲೂ ಐಸಿಸಿ ಈವೆಂಟ್ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಆದರೆ ರಾಜತಾಂತ್ರಿಕ ಕಾರಣದಿಂದ ಎಡು ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಅದಾಗ್ಯೂ ಈ ವರ್ಷ ಒಟ್ಟು 5 ಬಾರಿ ಇಂಡೋ-ಪಾಕ್ ಮ್ಯಾಚ್ ನಡೆಯುವ ಸಾಧ್ಯತೆ ಇದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಫುಲ್ ಥ್ರಿಲ್ ನೀಡಿದೆ.
ವಿಶೇಷ ಏನಂದರೇ ಈ 5 ಪಂದ್ಯಗಳು ಕೂಡ ಚುಟುಕು ಕ್ರಿಕೆಟ್ ನ ಹೋರಾಟವಾಗಿರುತ್ತದೆ.
ಹೌದು..! ಮೊದಲಿಗೆ ಏಷ್ಯಕಪ್ ಲೀಗ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಹೋರಾಟ ನಡೆಸಲಿವೆ. ಇವೆರಡು ಬಲಿಷ್ಠ ತಂಡಗಳಾಗಿರುವುದರಿಂದ ಸೂಪರ್ 4 ಹಂತಕ್ಕೆ ಏರುತ್ತವೆ ಅನ್ನುವ ಲೆಕ್ಕಾಚಾರವಿದೆ. ಸೂಪರ್ 4 ನಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದರೆ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

ಇದಾದ ಬಳಿಕ ಅಕ್ಟೋಬರ್ನಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲೂ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಮುಖಾಮುಖಿ ನಡೆಯಲಿದೆ. ಮೊದಲಿಗೆ ಲೀಗ್ ಹಣಾಹಣಿ ಫಿಕ್ಸ್ ಆಗಿದೆ. ಇಲ್ಲಿಂದ ಮೇಲೆ ಸೂಪರ್ 12ನಲ್ಲೂ ಮುಖಾಮುಖಿಯಾಗಬಹುದು. ಹೀಗಾಗಿ ಆಸ್ಟ್ರೇಲಿಯಾ ನೆಲದಲ್ಲೂ ಇಂಡೋ-ಪಾಕ್ ಕದನದ ಬಿಸಿ ಇರಲಿದೆ.
ಕಳೆದ ಟಿ20 ವಿಶ್ವಕಪ್ ಲೀಗ್ ಪಂದ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಪಂದ್ಯಗಳು ನಡೆದಿಲ್ಲ. ಹೀಗಾಗಿ ಈ ವರ್ಷದ ಅಂತ್ಯದಲ್ಲಿ ಉಭಯಗಳು ಬರೋಬ್ಬರು ಐದು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಅಂದಹಾಗೆ ಕಳೆದ ಟಿ 20 ವಿಶ್ವಕಪ್ ನಲ್ಲಿ ಇಂಡೋ ಪಾಕ್ ಕದನ ನಡೆದಾಗ, ಭಾರತ ತಂಡ ಹೀನಾಯವಾಗಿ ಸೋಲು ಅನುಭವಿಸಿತ್ತು. ಅಲ್ಲದೇ ಟೀಂ ಇಂಡಿಯಾದ ಆಟಗಾರರು ಸಾಕಷ್ಟು ಟೀಕೆಗಳಿಗೂ ಕೂಡ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಟೀಂ ಇಂಡಿಯಾ ಪಾಕಿಸ್ತಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.








