ರಾಹುಲ್ – ಪಂತ್ ಭರ್ಜರಿ ಬ್ಯಾಟಿಂಗ್ : ದಕ್ಷಿಣ ಆಫ್ರಿಕಾಗೆ 288 ರನ್ ಗಳ ಗುರಿ
ನಾಯಕ ಕೆ.ಎಲ್.ರಾಹುಲ್ ಜಬ್ದಾರಿಯುತ ಆಟ, ಸಿಡಿಲ ಮರಿ ರಿಷಬ್ ಪಂತ್ ಆರ್ಭಟ, ಲಾರ್ಡ್ ಶಾರ್ದೂಲ್ ಠಾಕೂರ್ ಸ್ಫೋಟ ಇದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಟೀಂ ಇಂಡಿಯಾ ಬ್ಯಾಟಿಂಗ್ ಹೈಲೆಟ್ಸ್..
ಹೌದು…! ಪರ್ಲ್ ಅಂಗಳದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್ ಗಳಿಗೆ ಆರು ವಿಕೆಟ್ ಕಳೆದುಕೊಂಡು 287 ರನ್ ಗಳಿಸಿದೆ. ಆ ಮೂಲಕ ಪಂದ್ಯ ಗೆಲ್ಲಲು ಆಫ್ರಿಕಾಗೆ 288 ರನ್ ಗಳ ಗುರಿ ನೀಡಿದೆ. ಭಾರತದ ಪರ ಕೆ.ಎಲ್ ರಾಹುಲ್, ರಿಷಬ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಆಲ್ ರೌಂಡರ್ ಶರ್ದೂಲ್ ಠಾಕೂರ್ 40 ರನ್ ಗಳಿದ್ದಾರೆ.
ಟಾಸ್ ಗೆದ್ದ ಕೆ.ಎಲ್.ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಶಿಖರ್ ಧವನ್, ರಾಹುಲ್ ತಂಡಕ್ಕೆ ಉತ್ತಮ ಆರಂಭ ನೀಡಿತು. ಈ ಜೋಡಿ ಮೊದಲ ವಿಕೆಟ್ ಗೆ 63 ರನ್ ಗಳ ಜೊತೆಯಾಟ ನೀಡಿತು. ಈ ವೇಳೆ 29 ರನ್ ಗಳಿಸಿದ್ದ ಶಿಖರ್ ಧವನ್ ಮಾರ್ಕ್ರಂಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ವಿರಾಟ್ ಶೂನ್ಯಕ್ಕೆ ಔಟ್ ಆದರು. ಈ ಹಂತದಲ್ಲಿ ರಾಹುಲ್ ಜೊತೆಗೂಡಿದ ರಿಷಬ್ ಪಂತ್, ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು.
71 ಎಸೆತಗಳನ್ನು ಎದುರಿಸಿದ ಪಂತ್, 10 ಬೌಂಡರಿ, 2 ಸಿಕ್ಸರ್ ನೆರವಿನಿಂದ 85 ರನ್ ಚಚ್ಚಿ ಔಟ್ ಆದರು. ಇದಾದ ಕೆಲವೇ ಹೊತ್ತಿನಲ್ಲಿ 79 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 55 ರನ್ ಗಳಿಸಿದ್ದ ರಾಹುಲ್, ಮಗಲಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶ್ರೇಯಸ್ 11 ರನ್, ವೆಂಕಟೇಶ್ ಅಯ್ಯರ್ 22 ಗಳಿಸಿ ಔಟ್ ಆದರು. ಶರ್ದೂಲ್ ಠಾಕೂರ್ ಅಂತಿಮವಾಗಿ 3 ಬೌಂಡರಿ, 1 ಸಿಕ್ಸರ್ ನೊಂದಿಗೆ 40 ರನ್ ಚಚ್ಚಿ ಅಜೇಯರಾಗಿದ್ದಾರೆ. ರವಿಚಂದ್ರನ್ ಅಶ್ವಿನ್ 25 ರನ್ ಗಳಿಸಿದ್ದಾರೆ.









