ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನ ಪ್ರಕಟಿಸಲಾಗಿದ್ದು, ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗಿಂತ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖವಾಗಿ 2023ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಹಾಗೂ ಮುಖೇಶ್ ಕುಮಾರ್ ಅವರುಗಳು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ರಣಜಿ ಟ್ರೋಫಿಗಿಂತಲೂ ಐಪಿಎಲ್‌ನಲ್ಲಿ ಮಿಂಚಿದವರಿಗೆ ಆಯ್ಕೆ ಸಮಿತಿ ಸದಸ್ಯರು ಮನ್ನಣೆ ನೀಡಿದ್ದು, ಆಯ್ಕೆ ಸಮಿತಿಯ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪ್ರಮುಖವಾಗಿ ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿರುವ ಭಾರತ ಟೆಸ್ಟ್ ತಂಡದಲ್ಲಿ ಕೆಲವು ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಪ್ರಮುಖವಾಗಿ ಸರ್ಫರಾಜ್ ಖಾನ್ ಹಾಗೂ ಮಯಂಕ್ ಅವರ್ಗಾಲ್ ಈ ಪಟ್ಟಿಯಲ್ಲಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್, ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದು ವಿಂಡೀಸ್ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಕೈತಪ್ಪಲು ಮುಖ್ಯ ಕಾರಣವಾದಂತಿದೆ.
ಇನ್ನೂ ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಮಯಂಕ್ ಅಗರ್ವಾಲ್, 9 ಪಂದ್ಯಗಳಲ್ಲಿ 990 ರನ್‌ಗಳಿಸಿದ್ದರು. ಹೀಗಾಗಿ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಮರಳುವ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಎಲ್ಲಾ ನಿರೀಕ್ಷೆಗಳು ಇದೀಗ ಹುಸಿಯಾಗಿದ್ದು, ಕರ್ನಾಟಕದ ಆರಂಭಿಕ ಆಟಗಾರನಿಗೆ ಅವಕಾಶ ನೀಡುವ ಬಗ್ಗೆ ಆಯ್ಕೆದಾರರು ಆಸಕ್ತಿ ತೋರಿಲ್ಲ.
ಉಳಿದಂತೆ ಅಭಿಮನ್ಯು ಈಶ್ವರನ್, ಧ್ರುವ್ ಶೋರೆ ಅವರುಗಳು ಸಹ ರಣಜಿ ಟ್ರೋಫಿಯಲ್ಲಿ ಮಿಂಚಿದ್ದರು, ಟೀಂ ಇಂಡಿಯಾದ ಟೆಸ್ಟ್ ತಂಡದ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ 2023ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂಲಕ ಪದಾರ್ಪಣೆ ಮಾಡಿರುವ ಬೆಂಗಾಲ್ ಮೂಲಕ ಯುವ ವೇಗದ ಬೌಲರ್ ಮುಖೇಶ್ ಕುಮಾರ್, ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಮುಖೇಶ್ ಕುಮಾರ್ ಟೆಸ್ಟ್ ಹಾಗೂ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ಅಂಶಗಳನ್ನ ಗಮನಿಸಿದರೆ ಬಿಸಿಸಿಐನ ಆಯ್ಕೆ ಮಂಡಳಿ, ರಣಜಿ ಟ್ರೋಫಿಗಿಂತ ಐಪಿಎಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಂತೆ ಕಾಣುತ್ತಿದೆ. ಆದರೆ ಐಪಿಎಲ್ ಟಿ20 ಪಂದ್ಯಾವಳಿಯಲ್ಲಿನ ಪ್ರದರ್ಶನದ ಆಧಾರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಟೆಸ್ಟ್ ತಂಡಕ್ಕೆ ಆಟಗಾರರನ್ನ ಆಯ್ಕೆ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.







