ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೂರ್ನಿಯ ಮೊದಲ ಟೆಸ್ಟ್ ನಲ್ಲಿ ಭಾರತ (Team India) ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ದಾಖಲೆಯ ಗೆಲುವು ದಾಖಲಿಸಿದೆ.
ಜಸ್ಪ್ರೀತ್ ಬುಮ್ರಾ (Jasprit Bumrah), ಸಿರಾಜ್, ಹರ್ಷಿತ್ ರಾಣಾ ಅವರ ಮಾರಕ ದಾಳಿ ಹಾಗೂ ಯಶಸ್ವಿ ಜೈಸ್ವಾಲ್, ಕಿಂಗ್ ಕೊಹ್ಲಿ, ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ದರ್ಬಾರ್‌ನಿಂದ ಭಾರತ, ಆಸೀಸ್‌ಗೆ ಪವರ್ ಪಂಚ್ ಕೊಟ್ಟಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿ 1-0 ಮುನ್ನಡೆ ಸಾಧಿಸಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ (WTC) ಫೈನಲ್ ಪ್ರವೇಶಿಸಬೇಕಾದರೆ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಭಾರತ ತಂಡ, ಬಲಿಷ್ಠ ಆಸ್ಪ್ರೇಲಿಯಾ (Australia) ತಂಡವನ್ನು ದಿಗ್ಭ್ರಮೆಗೊಳಿಸಿದೆ.
534 ರನ್ ಗಳ ಅಸಾಧಾರಣ ಗುರಿ ಬೆನ್ನಟಿದ ಆಸ್ಟ್ರೇಲಿಯಾ 3ನೇ ದಿನದ ಅಂತ್ಯಕ್ಕೆ 12 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. 522 ರನ್ ಗಳ ಹಿನ್ನಡೆಯೊಂದಿಗೆ 4ನೇ ದಿನದ ಆಟ ಆರಂಭಿಸಿತ್ತು. ಹೋರಾಟ ನಡೆಸಿದ ಆಸೀಸ್ 238 ರನ್ ಗಳಿಗೆ ಆಲ್ ಔಟ್ ಆಯಿತು.
ಭಾರತ 295 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ವಿಕೆಟ್‌ಗಳನ್ನು ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಭಾರತದ ಪರ ಜೈಸ್ವಾಲ್, 2ನೇ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಗೆ ಔಟಾದರು. ವಿರಾಟ್ ಕೊಹ್ಲಿ, ಆಕರ್ಷಕ ಶತಕ ಸಿಡಿಸುವ ಮೂಲಕ ಲಯ ಕಂಡುಕೊಂಡರು. ಕೆ.ಎಲ್. ರಾಹುಲ್ ಕೂಡ ಉತ್ತಮ ಆಟ ಪ್ರದರ್ಶಿಸಿದರು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಅಲಂಕರಿಸಿದೆ.