ದುಬೈ, ಜೂನ್ 8 : ದುಬೈನಲ್ಲಿ ಭಾರತೀಯ ಮೂಲದ ವೈದ್ಯ ಕೊರೋನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 61 ವರ್ಷದ ಮಹಾರಾಷ್ಟ್ರ ರಾಜ್ಯದ ನಾಗಪುರ ಮೂಲದವರಾದ ಡಾ.ಸುಧೀರ್ ರಂಬೌ ವಾಶ್ಮೀಕರ್ ಮೃತಪಟ್ಟ ವೈದ್ಯರು. ಇವರು ಶನಿವಾರ ದುಬೈನ ಆಲ್ ಐನ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ವೈದ್ಯರಾಗಿದ್ದ ಇವರು ವಿಪಿಎಸ್ ನೆಟ್ ವರ್ಕ್ ನ ಆಲ್ ಐನ್ ನ ಬುರ್ಜೀ ರಾಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮೇ 9 ರಂದು ಇವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಮೇ 11 ರಂದು ಆಲ್ ಐನ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 6 ರಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ದುಬೈನಲ್ಲಿ ಭಾನುವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಡಾ.ಸುಧೀರ್ ಎಲ್ಲರೊಂದಿಗೆ ಬೆರೆಯುತ್ತಿದ್ದ ಪ್ರಾಮಾಣಿಕ ಹಾಗೂ ನಿಷ್ಠ ವೈದ್ಯರಾಗಿದ್ದರು ಎಂದು ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.