ರಫೇಲ್ ಖರೀದಿಯಲ್ಲಿ ಅವ್ಯವಹಾರ ಆರೋಪಕ್ಕೆ ಪುಷ್ಠಿ : ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿ
ನವದೆಹಲಿ : ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ. ಇದರ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವ ನಡುವೆಯೇ ರಫೇಲ್ ವಿಮಾನಗಳು ಭಾರತಕ್ಕೆ ಬಂದಿಳಿದು ಸೇನೆಗೆ ಸೇರ್ಪಡೆಗೊಂಡಿವೆ.
ಇದೀಗ ಫ್ರಾನ್ಸ್ ನ ಮೀಡಿಯಾಪಾರ್ಟ್ ಆನ್ ಲೈನ್ ಪತ್ರಿಕೆಯ ವರದಿವೊಂದು “ನಿಜವಾಗಲೂ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿತ್ತಾ..?” ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ. ಸದ್ಯ ಎಲ್ಲೆಡೆ ಈ ವರದಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮೀಡಿಯಾ ಪಾರ್ಟ್ ಆನ್ ಲೈನ್ ಪತ್ರಿಕೆಯಲ್ಲಿ ರಫೇಲ್ ಯುದ್ಧ ವಿಮಾನಗಳ ತಯಾರಕರಾದ ಡಸ್ಸಾ ಕಂಪನಿಯು 2016ರಲ್ಲಿ ವಿಮಾನ ಖರೀದಿ ಒಪ್ಪಂದದ ನಂತರ ಭಾರತೀಯ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ ಹಣ ನೀಡಿತ್ತು ಎಂದು ವರದಿ ಮಾಡಿದೆ. ಇದಲ್ಲದೆ ಆ ಮಧ್ಯವರ್ತಿಯೂ ಮತ್ತೊಂದು ರಕ್ಷಣಾ ಒಪ್ಪಂದದಲ್ಲಿ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ.
‘ರಫೇಲ್ ಯುದ್ಧ ವಿಮಾನಗಳ 50 ಬೃಹತ್ ಪ್ರತಿರೂಪಗಳನ್ನು ತಯಾರಿಸಲು ಈ ಹಣ ಬಳಕೆಯಾಗಿದೆ’ ಎಂದು ಡಸ್ಸಾ ಕಂಪನಿ ಹೇಳಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯ ದೊರಕಿಲ್ಲ ಎಂದು ಮೀಡಿಯಾಪಾರ್ಟ್ ತಿಳಿಸಿದೆ.